ಯಾದಗಿರಿ | ಸಚಿವ ಖರ್ಗೆ ತಂಟೆಗೆ ಬಂದರೆ ಬೀದಿಗಿಳಿದು ಹೋರಾಟ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪುರ ಎಚ್ಚರಿಕೆ

ಯಾದಗಿರಿ: ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಅವಹೇಳನಕಾರಿ ಮಾತುಗಳು ಆಡುವುದನ್ನು ಮತ್ತು ಬೆದರಿಕೆ ಕರೆಗಳು ಮಾಡುವ ಕೆಲಸವನ್ನು ಕಿಡಿಗೇಡಿಗಳು ನಿಲ್ಲಿಸದಿದ್ದರೇ ಜಿಲ್ಲೆಯಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಮಾಲಿ ಪಾಟೀಲ್ ಅನಪುರ ಹೇಳಿದ್ದಾರೆ.
ಶುಕ್ರವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತಾಡುವ ಹಕ್ಕು ಎಲ್ಲರಿಗೂ ಇದೆ. ಆರೆಸ್ಸೆಸ್ ಸಂಘಟನೆ ಕೆಲಸ, ಕಾರ್ಯಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆಯಬಾರದೆಂದು ಹೇಳಿದ್ದಾರೆ. ಇದರಲ್ಲಿ ಸಚಿವರದ್ದು ಏನು ತಪ್ಪಿಲ್ಲ, ಆದರೆ ಬಿಜೆಪಿ ಸೇರಿದಂತೆಯೇ ಆರೆಸ್ಸೆಸ್ ನ ಕೆಲವರು ದೊಡ್ಡದಾಗಿ ಮಾಡಿದ್ದಾರೆ. ಆದರೇ ಗಿರಿಜಿಲ್ಲೆ ಕಾಂಗ್ರೆಸ್ ಜಿಲ್ಲಾ ಘಟಕ ಇದನ್ನು ಸಹಿಸುವುದಿಲ್ಲ. ಇದು ಇಲ್ಲಿಗೆ ಕೊನೆಯಾಗಬೇಕೆಂದು ಅಧ್ಯಕ್ಷ ಅನಪುರ ಗುಡಿಗಿ ಎಚ್ಚರಿಕೆ ನೀಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಿಯಾಂಕ ಖರ್ಗೆ ಅವರು ಶೇ.40 ಕಮೀಷನ್, ಪಿಎಸ್ಐ ನೇಮಕಾತಿ ಹಗರಣ, ಬಿಟ್‌ಕಾಯಿನ್ ಹಗರಣ ಸೇರಿದಂತೆ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆ ತಂದಿದ್ದರು. ಅದರಿಂದಲೇ ಬಿಜೆಪಿ ನಾಯಕರು ಖರ್ಗೆ ಕುಟುಂಬದ ವಿರುದ್ಧ ದ್ವೇಷ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುವ ಜನನಾಯಕರಾಗಿ ಹೊರಹೊಮ್ಮಿರುವ ಪ್ರಿಯಾಂಕ್ ಖರ್ಗೆ ಅವರ ಏಳಿಗೆ ಸಹಿಸದವರು ಮಾಡುತ್ತಿರುವ ಇಂತಹ ಹುಚ್ಚಾಟಕ್ಕೆ ಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತದೆ. ಇಂತಹ ಪ್ರಜಾಪ್ರಭುತ್ವದ ವಿರೋಧಿ ಕೆಲಸಗಳು ನಿಲ್ಲಿಸಬೇಕು, ಇಲ್ಲವಾದರೇ ಬೀದಿಗಿಳಿದು ಹೋರಾಟ ಮಾಡುವುದಾಗಿ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚಿದಾನಂದಪ್ಪ ಕಾಳೆಬೆಳಗುಂದಿ, ಮಲ್ಲಿಕಾರ್ಜುನ ಈಟೆ ಸೇರಿದಂತೆಯೇ ಇತರರಿದ್ದರು.
ನೇರ ನುಡಿಯ ವ್ಯಕ್ತಿತ್ವದ ಮತ್ತು ಅಭಿವೃದ್ಧಿ ಪರ ಕೆಲಸ ಮಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೆಲವರು ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದನ್ನು ಖಂಡಿಸಲಾಗುವುದು. ಇದು ಹೀಗೆ ಮುಂದುವರೆದರೇ ಕಾಂಗ್ರೆಸ್ ಪಕ್ಷ ಮತ್ತು ದಲಿತ ಸಂಘಟನೆಗಳು ಬೀದಿಗಿಳಿದು ರಕ್ತಪಾತದಂತಹ ಹೋರಾಟ ಮಾಡಬೇಕಾಗುತ್ತದೆ.
ಸಾಮ್ ಸನ್ ಮಾಳಿಕೇರಿ, ಜಿಲ್ಲಾ ವಕ್ತಾರ, ಕಾಂಗ್ರೆಸ್ ಪಕ್ಷ ಯಾದಗಿರಿ.







