ಯಾದಗಿರಿ | ಶಿಕ್ಷಕಿಯಿಂದ ವಿದ್ಯಾರ್ಥಿ ಮೇಲೆ ಹಲ್ಲೆ ಆರೋಪ : ಪೋಷಕರ ಆಕ್ರೋಶ

ಯಾದಗಿರಿ: ನಗರದ ಅಂಬೇಡ್ಕರ್ ಸರ್ಕಾರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿಯ ಮೇಲೆ ಶಿಕ್ಷಕಿಯೊಬ್ಬರು ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಮೌನೇಶ ಎಂಬ ವಿದ್ಯಾರ್ಥಿ ಈ ಘಟನೆಯಲ್ಲಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯ ವಿವರ :
ಸೋಮವಾರ ಮೌನೇಶ ಶಾಲೆಯ ಅನುಮತಿ ಪಡೆಯದೆ ಹೊರಗೆ ಹೋಗಿದ್ದ ಎನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಿದ ಶಿಕ್ಷಕಿ ರೂಪಾ ಅವರು ಏಕಾಏಕಿ ಕೋಪಗೊಂಡು ವಿದ್ಯಾರ್ಥಿಯ ಕೈಗೆ ಬಲವಾಗಿ ಹೊಡೆದಿದ್ದಾರೆ. ಶಿಕ್ಷಕಿಯ ಹೊಡೆತದ ತೀವ್ರತೆಗೆ ವಿದ್ಯಾರ್ಥಿಯ ಕೈ ಬಾತುಕೊಂಡಿದ್ದು (ಬಾವು), ಬಾಲಕ ರಾತ್ರಿಯಿಡೀ ಅತೀವ ನೋವಿನಿಂದ ಬಳಲಿದ್ದಾನೆ ಎಂದು ಕುಟುಂಬಸ್ಥರು ದೂರಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಶಾಲೆಯತ್ತ ಧಾವಿಸಿದ ಪೋಷಕರು ಶಿಕ್ಷಕಿಯ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಮಗು ತಪ್ಪು ಮಾಡಿದ್ದರೆ ಬುದ್ಧಿವಾದ ಹೇಳಬೇಕಿತ್ತು ಅಥವಾ ಪೋಷಕರಿಗೆ ತಿಳಿಸಬೇಕಿತ್ತು. ಅದನ್ನು ಬಿಟ್ಟು ಕೈ ಬಾವು ಬರುವಂತೆ ಈ ರೀತಿ ಹೊಡೆಯುವುದು ಎಷ್ಟರ ಮಟ್ಟಿಗೆ ಸರಿ?" ಎಂದು ಪೋಷಕರು ಆಕ್ರೋಶದಿಂದ ಪ್ರಶ್ನಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಇಂತಹ ಘಟನೆಗಳು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಲಿದ್ದು, ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣ ತನಿಖೆ ನಡೆಸಿ, ಹಲ್ಲೆ ನಡೆಸಿದ ಶಿಕ್ಷಕಿಯ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.







