ಯಾದಗಿರಿ | ಪತ್ರಕರ್ತರ ವೈದ್ಯಕೀಯ ನಿಧಿಗೆ 5 ಲಕ್ಷ ರೂ. ಅನುದಾನ ಮೀಸಲಿಡುವಂತೆ ಮನವಿ

ಯಾದಗಿರಿ: ಜಿಲ್ಲಾ ಕೇಂದ್ರದ ಪತ್ರಕರ್ತರ ವೈದ್ಯಕೀಯ ನೆರವಿಗಾಗಿ ನಗರಸಭೆಯ 2026–27ನೇ ಸಾಲಿನ ಬಜೆಟ್‌ನಲ್ಲಿ 5 ಲಕ್ಷ ರೂ. ಅನುದಾನ ಮೀಸಲಿಡುವಂತೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪೌರಾಯುಕ್ತ ಉಮೇಶ್ ಚವ್ಹಾಣ ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದ್ದು, ಪ್ರತಿವರ್ಷದಂತೆ ಈ ವರ್ಷವೂ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರು ಚಿಕಿತ್ಸೆ ಪಡೆಯಲು ಅಗತ್ಯವಿರುವ ಅನುದಾನವನ್ನು ಬಜೆಟ್‌ನಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಲಾಯಿತು.
ಪತ್ರಕರ್ತರು ಜೀವದ ಹಂಗನ್ನು ತೊರೆದು ಸಮಾಜದ ಹಿತಕ್ಕಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಆರೋಗ್ಯ ಸಮಸ್ಯೆಗಳು ಎದುರಾದಾಗ ನಗರಸಭೆಯ ವೈದ್ಯಕೀಯ ನಿಧಿಯಿಂದ ಸಿಗುವ ಆರ್ಥಿಕ ನೆರವು ಬಹಳ ಉಪಯುಕ್ತವಾಗುತ್ತದೆ. ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಘದವರು ಮನವಿ ಮಾಡಿದ್ದಾರೆ.
ಪತ್ರಕರ್ತರ ಸೇವೆ ಅನನ್ಯವಾಗಿದ್ದು, ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕೆಂದು ಇದೇ ಸಂದರ್ಭದಲ್ಲಿ ಪೌರಾಯುಕ್ತರಿಗೆ ಸಂಘದ ವತಿಯಿಂದ ಕೋರಲಾಯಿತು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ, ರಾಜ್ಯ ಪರಿಷತ್ ಸದಸ್ಯ ಸಾಗರ್ ದೇಸಾಯಿ, ಜಿಲ್ಲಾ ಖಜಾಂಚಿ ರಾಜು ನಲ್ಲಿನಕರ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಆನಂದ ಗೋರ್ಕಲ್, ವಡಗೇರಾ ತಾಲೂಕು ಅಧ್ಯಕ್ಷ ನಾಗಪ್ಪ ಕುಂಬಾರ ನಾಯ್ಕಲ್ ಹಾಗೂ ಪತ್ರಕರ್ತರಾದ ಗಣೇಶ್ ಪಾಟೀಲ್, ನಾಗರಾಜ ಮುಗದುಮ್, ಭೀರಲಿಂಗಪ್ಪ ಕಿಲ್ಲನಕೇರಾ ಉಪಸ್ಥಿತರಿದ್ದರು.







