ಯಾದಗಿರಿ | ಮಕ್ಕಳ ಸಮಗ್ರ ಬೆಳವಣಿಗೆಗೆ ಪಾಠದ ಜೊತೆಗೆ ಕಲೆ, ಸಂಸ್ಕೃತಿ ಅಗತ್ಯ : ಮಲ್ಲೇಶ್ ನಾಯಕ್

ಯಾದಗಿರಿ: ತಾಲ್ಲೂಕಿನ ನೀಲಹಳ್ಳಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಇನ್ಫೋಸಿಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಬಾಲಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ಮಲ್ಲೇಶ್ ನಾಯಕ್ ಕೂಡ್ಲೂರು ಅವರು, ಮಕ್ಕಳ ಶಿಕ್ಷಣವು ಪಠ್ಯಕ್ಕೆ ಮಾತ್ರ ಸೀಮಿತವಾಗಿರಬಾರದು ಎಂದು ಹೇಳಿದರು. ಪಾಠಗಳ ಜೊತೆಗೆ ಆಟ, ಕಲೆ, ಸಂಸ್ಕೃತಿ, ಸಂಗೀತ ಹಾಗೂ ನಾಟಕಗಳಂತಹ ಚಟುವಟಿಕೆಗಳನ್ನು ಒಳಗೊಂಡಾಗ ಮಾತ್ರ ಮಕ್ಕಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ಸಾಂಸ್ಕೃತಿಕ ಮೌಲ್ಯಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೀಲಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಬೀಮಶಪ್ಪ, ಬೀಮಪ್ಪ ಹಾಗೂ ಸಾಬು ನಾಯಕ ಮಾತನಾಡಿ, ಇಂತಹ ಕಾರ್ಯಕ್ರಮಗಳು ಗ್ರಾಮೀಣ ಮಕ್ಕಳ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅನೀತಾ, ಇನ್ಫೋಸಿಸ್ ಸಮಿತಿ ಸದಸ್ಯ ಮಲ್ಲೇಶ್ ನೇಲೊಗಿ, ಅಂಗನವಾಡಿ ಕಾರ್ಯಕರ್ತೆಯರಾದ ಬನ್ನಮ್ಮ, ಪಾರ್ವತಿ, ಬನ್ನಮ್ಮ, ಕೂಡ್ಲೂರು ಗ್ರಾಮದ ಶರಬಮ್ಮ, ಕೃಷ್ಣಮ್ಮ, ಮಾಲಾಶ್ರೀ ಸೇರಿದಂತೆ ಅನೇಕರು ಭಾಗವಹಿಸಿದ್ದರು.







