ಯಾದಗಿರಿ | ಮಾಜಿ ನಗರಸಭೆ ಅಧ್ಯಕ್ಷೆಯ ಹತ್ಯೆಗೆ ಯತ್ನ

ಅಂಜಲಿ ಗಿರೀಶ
ಯಾದಗಿರಿ : ಸಮಾಜ ಕಲ್ಯಾಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಹಾಗೂ ಶಹಾಬಾದ್ ನಗರಸಭೆಯ ಮಾಜಿ ಅಧ್ಯಕ್ಷೆ ಅಂಜಲಿ ಗಿರೀಶ ಕಾಂಬಾನೂರರ ಹತ್ಯೆಗೆ ಯತ್ನ ನಡೆದಿದ್ದು, ಘಟನೆಯು ಬುಧವಾರ ಬೆಳಿಗ್ಗೆ ಚಿತ್ತಾಪುರ ರಸ್ತೆಯ ಗ್ರೀನ್ಸಿಟಿ ಸಮೀಪ ನಡೆದಿದೆ.
ಗಂಭೀರವಾಗಿ ಗಾಯಗೊಂಡ ಅಂಜಲಿ ಅವರನ್ನು ಕಾರು ಚಾಲಕ ಅಜೀಮಿರ್ ತಕ್ಷಣ ಯಾದಗಿರಿಯ ಯಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಗೆ ಸ್ಥಳಾಂತರಿಸಲಾಗಿದೆ.
ಅಂಜಲಿ ಅವರು ದಲಿತ ದೌರ್ಜನ್ಯ ಕಾಯ್ದೆಯಡಿ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿಯಲ್ಲಿದ್ದರು. ಈ ಹಿಂದೆ ಶಹಾಬಾದ್ ನಗರಸಭೆಯ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಕೆಲವು ವರ್ಷಗಳ ಹಿಂದೆ ಇವರ ಪತಿ ಗಿರೀಶ ಅವರನ್ನು ಶಹಾಬಾದ್ ನಗರದ ಮಧ್ಯದಲ್ಲೇ ಹತ್ಯೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಪತಿಯ ಹತ್ಯೆ ಪ್ರಕರಣದ ಹಳೆಯ ವೈಷಮ್ಯವೇ ಈ ದಾಳಿಗೆ ಕಾರಣ ಎಂದು ಪ್ರಾಥಮಿಕ ಮಾಹಿತಿ ದೊರೆತಿದ್ದು, ಘಟನಾ ಸ್ಥಳಕ್ಕೆ ಎಸ್ಪಿ ಪ್ರಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.





