ಯಾದಗಿರಿ | ಬೆಳೆ ಹಾನಿ; ಪರಿಹಾರ ಬಿಡುಗಡೆಗೆ ಸರಕಾರದ ವಿಳಂಬ ಖಂಡನೀಯ : ಚಂದ್ರಶೇಖರಗೌಡ ಮಾಗನೂರ

ಯಾದಗಿರಿ: ಜಿಲ್ಲೆಯಲ್ಲಿ ಸತತ ಮಳೆ ಮತ್ತು ಪ್ರವಾಹದಿಂದಾಗಿ 1.42 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳು ನಾಶವಾದರೂ, ಪರಿಹಾರ ಬಿಡುಗಡೆ ಮಾಡುವಲ್ಲಿ ಸರ್ಕಾರ ತೋರಿಸುತ್ತಿರುವ ವಿಳಂಬ ಮತ್ತು ನಿರ್ಲಕ್ಷ್ಯ ಖಂಡನೀಯ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲಾಡಳಿತ ಎಲ್ಲಾ ಹಾನಿ ಸಮೀಕ್ಷೆಗಳನ್ನು ಪೂರ್ಣಗೊಳಿಸಿ ತಿಂಗಳಾದರೂ, ಸರ್ಕಾರ ಇನ್ನೂ ಯಾವುದೇ ಮುಂದಾಳತ್ವ ತೋರದೇ ಕುಳಿತಿರುವುದು ಸ್ಪಷ್ಟವಾಗಿ ರೈತ ವಿರೋಧಿ ಮನೋಭಾವನೆ ಎಂದು ಹೇಳಿದರು.
ಜಿಲ್ಲೆಯ ರೈತರಿಗೆ ವಿತರಿಸಬೇಕಾದ ಪರಿಹಾರ ಹಣ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಯಾವೊಬ್ಬ ರೈತನ ಖಾತೆಗೆ ನಯಾ ಪೈಸೆಯೂ ಜಮಾ ಆಗಿಲ್ಲ. ಬೆಳೆ ಕಳೆದುಕೊಂಡ ಸಾವಿರಾರು ರೈತರು ಸಾಲದ ಬಾಧೆಯಿಂದಾಗಿ ದಿನನಿತ್ಯದ ಬದುಕಿನ ಹೋರಾಟದಲ್ಲಿದ್ದಾರೆ. ಆದರೆ ಸರ್ಕಾರಕ್ಕೆ ರೈತರ ಕಷ್ಟ ಗೋಚರಿಸದಂತೆ ಕಾಣುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಹದಿಂದ ಅತ್ಯಧಿಕ ಹಾನಿ ಯಾದಗಿರಿ ಜಿಲ್ಲೆಯಲ್ಲಿ ನಡೆದಿದ್ದರೂ, ಜಿಲ್ಲೆಯ ಮತಕ್ಷೇತ್ರಗಳ ಶಾಸಕರು ತಮಗೇ ಸೀಮಿತವಾದ ರಾಜಕೀಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರೈತರ ಸಮಸ್ಯೆಗಳನ್ನು ಸರ್ಕಾರದ ಮುಂದೆ ಜೋರಾಗಿ ಮಂಡಿಸಲು ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.







