ಯಾದಗಿರಿ | ನಿರಂತರ ಮಳೆಯಿಂದ ಬೆಳೆ ನಾಶ; ಎಕರೆಗೆ 50 ಸಾವಿರ ರೂ. ಪರಿಹಾರ ನೀಡಲಿ : ಸರಕಾರಕ್ಕೆ ಮಾಗನೂರ ಒತ್ತಾಯ

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಹತ್ತಿ, ಹೆಸರು, ತೊಗರಿ, ಸಜ್ಜೆ ಸೇರಿದಂತೆ ಹಲವಾರು ಬೆಳೆಗಳು ನೀರಿನಲ್ಲಿ ಮುಳುಗಿದ್ದು, ಬಿತ್ತನೆ ಮಾಡಿದ ರೈತರು ದೊಡ್ಡ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಈ ಗಂಭೀರ ಪರಿಸ್ಥಿತಿಯಲ್ಲಿ ಸರ್ಕಾರ ತಕ್ಷಣವೇ ರೈತರ ಪರವಾಗಿ ಮುಂದೆ ಬಂದು ಸೂಕ್ತ ಪರಿಹಾರ ಒದಗಿಸಬೇಕು ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ರೈತರ ದುಡಿಮೆ ಸಂಪೂರ್ಣ ನೆಲಸಮವಾಗಿದೆ. ಈಗಾಗಲೇ ಸಾಲದ ಭಾರದಲ್ಲಿ ಸಿಲುಕಿರುವ ರೈತರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಸರ್ಕಾರ ತಕ್ಷಣವೇ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿ, ಹಾನಿಗೊಳಗಾದ ರೈತರ ನೈಜ ಸ್ಥಿತಿಯನ್ನು ಗುರುತಿಸಿ ಎಕರೆಗೆ ಕನಿಷ್ಠ 50 ಸಾವಿರ ರೂ. ಪರಿಹಾರ ಘೋಷಿಸಬೇಕು. ಕೇವಲ ಸಮೀಕ್ಷೆಗಳ ಹೆಸರಲ್ಲಿ ಕಾಲಹರಣ ಮಾಡುವುದು ಶೋಭೆ ತರುವಂಥದಲ್ಲ ಎಂದು ಆಗ್ರಹಿಸಿದರು.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಮ್ಮ ಸರ್ಕಾರವು ಕೇಂದ್ರದ ಎನ್‌ಡಿಆರ್‌ಎಫ್ ಪರಿಹಾರಕ್ಕಿಂತ ಹೆಚ್ಚಾಗಿ ರೈತರಿಗೆ ನೆರವು ನೀಡಿತ್ತು. ಅದೇ ರೀತಿಯಲ್ಲಿ ಇಂದಿನ ಸರ್ಕಾರವೂ ಮಾನವೀಯ ಧೋರಣೆ ತಾಳಿಕೊಂಡು, ತುರ್ತು ಪರಿಹಾರ ಧನ ಬಿಡುಗಡೆ ಮಾಡಬೇಕು. ರೈತರ ಕಣ್ಣೀರನ್ನು ತೊಳೆದು ಸರ್ಕಾರ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕು ಎಂದು ಒತ್ತಾಯಿಸಿದರು.
ಮಳೆ ನಿಂತ ನಂತರ ಕ್ರಮ ಕೈಗೊಳ್ಳುವುದರಿಂದ ರೈತರ ಸಂಕಷ್ಟ ಪರಿಹಾರವಾಗುವುದಿಲ್ಲವೆಂದು ಎಚ್ಚರಿಸಿದ ಅವರು, ಸಂಕಷ್ಟದ ಹೊತ್ತಿನಲ್ಲಿ ರೈತನ ಬೆನ್ನೆಲುಬು ಕುಗ್ಗದಂತೆ ಬೆಂಬಲ ನೀಡುವುದು ಸರ್ಕಾರದ ನಿಜವಾದ ಕರ್ತವ್ಯ. ರೈತರು ಬೀದಿಗಿಳಿಯುವ ಸ್ಥಿತಿ ಬಂದರೆ, ಅದರ ಹೊಣೆ ಸರ್ಕಾರಕ್ಕೇ ಸೇರಲಿದೆ ಎಂದು ಎಚ್ಚರಿಕೆ ನೀಡಿದರು.
ಅಲ್ಲದೆ, ನಿರಂತರ ಮಳೆಯಿಂದ ಹಲವಾರು ಗ್ರಾಮಗಳ ಸಂಪರ್ಕ ಕಳೆದುಕೊಂಡಿರುವುದರಿಂದ, ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಹೋಗಲು ಜನರಿಗೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಆರ್‌ಡಿಪಿಆರ್ ಮತ್ತು ಪಿಡಬ್ಲ್ಯೂಡಿ ಇಲಾಖೆ ಮೂಲಕ ಕೂಡಲೇ ದುರಸ್ತಿ ಕಾರ್ಯ ಕೈಗೊಂಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಬೇಕು. ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಲ್ಲದೇ ಮಳೆಯಿಂದಾಗಿ ಅನೇಕ ಮನೆಗಳು ಕುಸಿದು ಬಿದ್ದಿವೆ. ಮನೆ ಕಳೆದುಕೊಂಡ ಕುಟುಂಬಗಳಿಗೆ ತಕ್ಷಣ ಪರಿಹಾರದ ಹಣ ಬಿಡುಗಡೆ ಮಾಡಿ, ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕು. ಮಳೆ ಹಾನಿಗೊಳಗಾದ ರೈತರು ಹಾಗೂ ಗೃಹಹೀನರಾದ ಕುಟುಂಬಗಳಿಗೆ ತಕ್ಷಣ ನೆರವು ತಲುಪಿಸದಿದ್ದರೆ, ಸರ್ಕಾರದ ನಿರ್ಲಕ್ಷ್ಯ ಜನರ ಕೋಪಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.







