ಯಾದಗಿರಿ | ಸಿಲಿಂಡರ್ ಕೊರತೆ : ಸೌದೆ ಒಲೆ ಹಚ್ಚಿ ಅಡುಗೆ ಮಾಡಿದ ಇಂದಿರಾ ಕ್ಯಾಂಟಿನ್ ಸಿಬ್ಬಂದಿ

ಯಾದಗಿರಿ: ನಗರದ ಗಂಜ್ ಪ್ರದೇಶದಲ್ಲಿರುವ ಇಂದಿರಾ ಕ್ಯಾಂಟಿನ್ ನಲ್ಲಿ ಕಳೆದ ಎರಡು ದಿನಗಳಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಸಂಪೂರ್ಣ ಖಾಲಿಯಾಗಿರುವ ಹಿನ್ನೆಲೆಯಲ್ಲಿ ಅಡುಗೆ ಕಾರ್ಯಕ್ಕೆ ತೊಂದರೆ ಉಂಟಾಗಿದೆ.
ಸಿಲಿಂಡರ್ ಲಭ್ಯವಾಗದ ಕಾರಣ ಸಿಬ್ಬಂದಿ ಕ್ಯಾಂಟಿನ್ ಹೊರಭಾಗದಲ್ಲಿ ಸೌದೆ ಒಲೆ ಹಚ್ಚಿ ಅಡುಗೆ ಮಾಡುವ ಪರಿಸ್ಥಿತಿ ಎದುರಾಗಿದೆ. ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ಅಡುಗೆ ವ್ಯವಸ್ಥೆ ವ್ಯತ್ಯಯಗೊಂಡರೂ, ಬಡವರಿಗೆ ಆಹಾರ ಒದಗಿಸುವ ಕಾರ್ಯವನ್ನು ನಿಲ್ಲಿಸದೇ ಸಿಬ್ಬಂದಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಬಡವರು ಉಪವಾಸ ಇರಬಾರದು ಎಂಬ ಮನೋಭಾವದಿಂದ ಸಿಬ್ಬಂದಿ ಸೌದೆ ಬಳಸಿ ಅನ್ನ, ಸಾಂಬಾರ್, ಚಪಾತಿ, ಪಲ್ಯ, ದೋಸೆ ಸೇರಿದಂತೆ ವಿವಿಧ ತಿನಿಸುಗಳನ್ನು ಸಿದ್ಧಪಡಿಸಿ ಜನರಿಗೆ ನೀಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಇದೇ ರೀತಿಯಲ್ಲಿ ಸೌದೆ ಬಳಸಿ ಅಡುಗೆ ಮಾಡುತ್ತಾ ಕ್ಯಾಂಟಿನ್ ಸೇವೆಯನ್ನು ಮುಂದುವರಿಸಿದ್ದಾರೆ.
ಇಂದಿರಾ ಕ್ಯಾಂಟಿನ್ ಮೇಲೆ ಅವಲಂಬಿತವಾಗಿರುವ ಬಡವರು, ಕೂಲಿ ಕಾರ್ಮಿಕರು ಹಾಗೂ ಪ್ರಯಾಣಿಕರಿಗೆ ಆಹಾರ ದೊರಕುವಂತೆ ಮಾಡಲು ಸಿಬ್ಬಂದಿ ಕ್ಯಾಂಟಿನ್ ಹೊರಭಾಗದಲ್ಲೇ ಸೌದೆ ಒಲೆ ಹಚ್ಚಿ ಅಡುಗೆ ಮಾಡಿ ಸೇವೆ ಒದಗಿಸಿದ್ದಾರೆ.






