ಯಾದಗಿರಿ | ಎಸ್‌ಪಿ ಪವನ್ ನೆಜ್ಜೂರ್ ಅಮಾನತು ಖಂಡಿಸಿ ರಾಜ್ಯಪಾಲರಿಗೆ ದಲಿತ ಸಂಘರ್ಷ ಸಮಿತಿ ಮನವಿ

ಯಾದಗಿರಿ: ಬಳ್ಳಾರಿ ನಗರದಲ್ಲಿ ನಡೆದ ಗುಂಪು ಘರ್ಷಣೆ ಪ್ರಕರಣದ ಹಿನ್ನೆಲೆಯಲ್ಲಿ ಅಮಾಯಕ ಎಸ್.ಪಿ. ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಿರುವ ಕ್ರಮವನ್ನು ಖಂಡಿಸಿ, ದಲಿತ ಸಂಘರ್ಷ ಸಮಿತಿ (ಭೀಮವಾದ) ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಜನವರಿ 1, 2026ರಂದು ಬಳ್ಳಾರಿ ನಗರದಲ್ಲಿ ವಾಲ್ಮೀಕಿ ಮಠದ ಅನಾವರಣ ಕಾರ್ಯಕ್ರಮದ ಬ್ಯಾನರ್ ಅಳವಡಿಕೆ ವಿಚಾರವಾಗಿ ಶಾಸಕ ಜನಾರ್ಧನರೆಡ್ಡಿ ಹಾಗೂ ಶಾಸಕ ಭರತ್ ರೆಡ್ಡಿ ಅವರ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿತ್ತು. ಈ ಘಟನೆಯಲ್ಲಿ ರಾಜಶೇಖರ ಎಂಬವರು ಸಾವನ್ನಪ್ಪಿದ್ದು, ಘಟನೆಗೆ ನೇರ ಕಾರಣಕರ್ತರಾದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳದೆ, ಅಧಿಕಾರ ವಹಿಸಿಕೊಂಡ ಕೇವಲ ಮೂರು ಗಂಟೆಗಳಲ್ಲೇ ಎಸ್.ಪಿ. ಪವನ್ ನೆಜ್ಜೂರ್ ಅವರನ್ನು ಹೊಣೆಗಾರರನ್ನಾಗಿ ಮಾಡಿ ಅಮಾನತು ಮಾಡಿರುವುದು ಅನ್ಯಾಯಕರವಾಗಿದೆ ಎಂದು ಆರೋಪಿಸಿದರು.
ಘರ್ಷಣೆಯ ವೇಳೆ ಶಾಸಕರು ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನು ಮರೆತು ರೌಡಿಗಳಂತೆ ವರ್ತಿಸಿದ್ದಾರೆ. ಶಾಸಕ ಭರತರೆಡ್ಡಿ ಅವರ ಖಾಸಗಿ ಗನ್‌ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿರುವುದು ಗಂಭೀರ ಕಾನೂನು ಉಲ್ಲಂಘನೆಯಾಗಿದ್ದು, ಇದರಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗಿದೆ ಎಂದು ಸಮಿತಿ ಕಿಡಿಕಾರಿತು.
ರಾಜಕೀಯ ಸ್ವಾರ್ಥದ ಕಿತ್ತಾಟದ ಪರಿಣಾಮವಾಗಿ ಒಬ್ಬ ಅಮಾಯಕ ವ್ಯಕ್ತಿ ಬಲಿಯಾಗಿದ್ದು, ಅವರ ಕುಟುಂಬಕ್ಕೆ ನ್ಯಾಯ ಒದಗಿಸುವ ಹೊಣೆ ಸರ್ಕಾರದ ಮೇಲಿದೆ. ಆದರೆ ಘಟನೆಗೆ ಹೊಣೆಗಾರರಾದ ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಪೊಲೀಸ್ ಇಲಾಖೆಯನ್ನು ರಾಜಕೀಯ ಕೈಗೊಂಬೆಯಂತೆ ಬಳಸಿಕೊಂಡು ಪ್ರಾಮಾಣಿಕ ಅಧಿಕಾರಿ ಎಸ್.ಪಿ. ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಿರುವುದು ಅತ್ಯಂತ ಖಂಡನೀಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆದ್ದರಿಂದ ಕೂಡಲೇ ಎಸ್.ಪಿ. ಪವನ್ ನೆಜ್ಜೂರ್ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ, ಈ ಘಟನೆಗೆ ಮೂಲ ಕಾರಣಕರ್ತರಾದ ಶಾಸಕ ಜನಾರ್ಧನರೆಡ್ಡಿ ಹಾಗೂ ಶಾಸಕ ಭರತರೆಡ್ಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಮೃತಪಟ್ಟ ರಾಜಶೇಖರ ಅವರ ಕುಟುಂಬಕ್ಕೆ ನ್ಯಾಯ ಮತ್ತು ಪರಿಹಾರ ಒದಗಿಸಬೇಕು ಎಂದು ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಶರಣು ದೊರನಹಳ್ಳಿ, ಬಸವರಾಜ ಚಿಪ್ಪಾರ್, ಶಿವು ಪೋತೆ, ಸಂತೋಷ ಗೋಗಿ, ಶರಣು ಹುರುಸಗುಂಡಗಿ, ವಿಶ್ವ ನಾಟೇಕಾರ್, ಸಂಗು ಕೆಂಭಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







