ಯಾದಗಿರಿ | ಭೀಮಾ ನದಿಯ ಜಾಕ್‌ವೆಲ್‌ಗೆ ಹಾನಿ : ಟ್ಯಾಂಕರ್ ಮೂಲಕ ನೀರು ಪೂರೈಕೆ

ಯಾದಗಿರಿ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭೀಮಾ ನದಿಯ ಜಾಕ್‌ವೆಲ್ ಹಾನಿಗೊಳಗಾಗಿ ನೀರಿನ ಪೂರೈಕೆ ಸ್ಥಗಿತಗೊಂಡಿದ್ದು, ನಗರದ ವಿವಿಧ ಕಡೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಂಡ ನಗರಸಭೆಯು ನಾಗರಿಕರಿಗೆ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಆರಂಭಿಸಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಅಂಬೇಡ್ಕರ್ ನಗರದಲ್ಲಿ ಟ್ಯಾಂಕರ್ ಹತ್ತಿರ ಜನರು ಜಮಾವಣೆಗೊಂಡು ತಮ್ಮ ತಮ್ಮ ಪಾತ್ರೆಗಳಲ್ಲಿ ನೀರು ತುಂಬಿಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ಹಠಾತ್ ನೀರಿನ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸಹ ಪ್ಲಾಸ್ಟಿಕ್ ಪಾತ್ರೆ, ಸ್ಟೀಲ್ ಬಕೆಟ್, ಡಬ್ಬೆಗಳೊಂದಿಗೆ ಸಾಲಿನಲ್ಲಿ ನಿಂತು ನೀರು ತುಂಬಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದಿದೆ.
ನಗರಸಭೆಯ ಅಧಿಕಾರಿಗಳು “ಭೀಮಾ ನದಿಯ ಜಾಕ್‌ವೆಲ್ ದುರಸ್ತಿ ಕಾರ್ಯ ತ್ವರಿತಗೊಳಿಸಲಾಗುತ್ತಿದೆ. ಶಾಶ್ವತ ನೀರಿನ ಪೂರೈಕೆ ಪುನಃಸ್ಥಾಪನೆಯಾಗುವವರೆಗೂ ನಾಗರಿಕರಿಗೆ ಟ್ಯಾಂಕರ್‌ಗಳ ಮೂಲಕ ನೀರಿನ ಪೂರೈಕೆ ಮುಂದುವರಿಯುತ್ತದೆ ಎಂದು ನಗರಸಭೆ ಅಧ್ಯಕ್ಷೆ ಕು. ಲಲಿತಾ ಅನ್ನಪೂರ ತಿಳಿಸಿದ್ದಾರೆ.







