ಯಾದಗಿರಿ | ಹಾಡಹಗಲೇ ಕಾರಿನಲ್ಲಿಟ್ಟಿದ್ದ ಹಣ-ಚಿನ್ನಾಭರಣ ಕಳವು : ಪ್ರಕರಣ ದಾಖಲು

ಯಾದಗಿರಿ: ನಗರದ ರೈಲ್ವೆ ಸ್ಟೇಷನ್ ಸಮೀಪ ಹಾಡಹಗಲೇ ಕಾರಿನಲ್ಲಿ ಇಟ್ಟಿದ್ದ 15.5 ಲಕ್ಷ ರೂ. ನಗದು ಹಾಗೂ 35 ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿ ಪರಾರಿಯಾದ ಘಟನೆ ಗುರುವಾರ ನಡೆದಿದೆ.
ಯಾದಗಿರಿ: ನಗರದ ರೈಲ್ವೆ ನಿಲ್ದಾಣದ ಸಮೀಪದ ಮುಖ್ಯರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಹಾಡಹಗಲೇ ದುಷ್ಕರ್ಮಿಗಳು ಕಾರಿನಲ್ಲಿದ್ದ 15.5 ಲಕ್ಷ ರೂ. ನಗದು ಹಾಗೂ 35 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ ನಿವಾಸಿ ಶರಣಪ್ಪ ಎಂಬುವವರಿಗೆ ಸೇರಿದ ನಗದು ಮತ್ತು ಆಭರಣ ಇದಾಗಿದ್ದು, ಆಸ್ತಿ ನೋಂದಣಿ ಕಾರ್ಯಕ್ಕಾಗಿ ಹಣದೊಂದಿಗೆ ಅವರು ಕುಟುಂಬಸ್ಥರೊಡನೆ ನಗರಕ್ಕೆ ಆಗಮಿಸಿದ್ದರು. ಶರಣಪ್ಪ ಅವರು ರೈಲ್ವೆ ನಿಲ್ದಾಣದ ಸಮೀಪವಿರುವ ಜ್ಯೂಸ್ ಅಂಗಡಿಯೊಂದರ ಬಳಿ ತಮ್ಮ ಕಾರನ್ನು ನಿಲ್ಲಿಸಿ ಹೊರಬಂದಿದ್ದರು. ಇದೇ ಸಮಯಕ್ಕೆ ಹೊಂಚು ಹಾಕುತ್ತಿದ್ದ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕುಟುಂಬಸ್ಥರ ಗಮನವನ್ನು ಬೇರೆಡೆ ಸೆಳೆದು ಕಾರಿನಲ್ಲಿದ್ದ ಹಣದ ಬ್ಯಾಗ್ ಹಾಗೂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಆಸ್ತಿ ಖರೀದಿಗಾಗಿ ತಂದಿದ್ದ ಹಣ ಹಾಗೂ ಬಂಗಾರ ಕಳೆದುಕೊಂಡ ಶರಣಪ್ಪ ಹಾಗೂ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮಾಹಿತಿ ಪಡೆದ ಯಾದಗಿರಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





