ಯಾದಗಿರಿ | ಗುರುಮಠಕಲ್ನಲ್ಲಿ ಅ.31ರಂದು ನಡೆಯಲಿರುವ ಆರೆಸ್ಸೆಸ್ ಪಥಸಂಚಲನಕ್ಕೆ ಜಿಲ್ಲಾಡಳಿತದಿಂದ ಅನುಮತಿ

ಸಾಂದರ್ಭಿಕ ಚಿತ್ರ PC: x.com/VSKKarnataka
ಯಾದಗಿರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕ್ಷೇತ್ರವಾದ ಗುರುಮಠಕಲ್ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಪಥಸಂಚಲನಕ್ಕೆ ಜಿಲ್ಲಾಡಳಿತವು ಷರತ್ತು ಬದ್ಧ ಅನುಮತಿ ನೀಡಿದೆ.
ಅ.31ರಂದು ನಡೆಯಲಿರುವ ಈ ಪಥಸಂಚಲನಕ್ಕೆ ಯಾದಗಿರಿ ಜಿಲ್ಲಾಡಳಿತದಿಂದ ‘ಗ್ರೀನ್ ಸಿಗ್ನಲ್’ ಸಿಕ್ಕಿದ್ದು, ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರು ಅನುಮತಿ ನೀಡಿದ್ದಾರೆ.
ಪಥಸಂಚಲನವು ಗುರುಮಠಕಲ್ ಪಟ್ಟಣದ ನರೇಂದ್ರ ರಾಠೋಡ್ ಲೇಔಟ್ನಿಂದ ಆರಂಭವಾಗಿ ಸಾಮ್ರಾಟ್ ವೃತ್ತ, ಬಸವೇಶ್ವರ ವೃತ್ತ, ಹನುಮಾನ್ ದೇವಾಲಯ, ಕುಂಬಾರವಾಡಿ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಲಿದೆ. ಆದರೆ, ಸಾರ್ವಜನಿಕ ಶಾಂತಿ ಕದಡುವ ಅಥವಾ ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯ ಘೋಷಣೆಗಳನ್ನು ಕೂಗಬಾರದು ಎಂಬ ಸೂಚನೆ ನೀಡಲಾಗಿದೆ.
ಪಥಸಂಚಲನ ವೇಳೆ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ. ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಹೋಗುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಸೇರಿ ಹತ್ತು ಷರತ್ತುಗಳನ್ನು ವಿಧಿಸಿ ಜಿಲ್ಲಾಡಳಿತ ಅನುಮತಿ ನೀಡಿದೆ.







