ಯಾದಗಿರಿ | ದಲಿತರ ರುದ್ರಭೂಮಿ ಒತ್ತುವರಿ ತೆರವುಗೊಳಿಸಿ ಹಸ್ತಾಂತರಿಸಲು ಡಿಎಸ್ಎಸ್ ಆಗ್ರಹ

ಯಾದಗಿರಿ : ಶಹಾಪುರ ತಾಲ್ಲೂಕಿನ ದೋರನಹಳ್ಳಿ ಹೊಬಳಿಯ ಚಟ್ನಳ್ಳಿ ಗ್ರಾಮದ ಮರಮಕಲ್ ಸೀಮಾಂತರದಲ್ಲಿರುವ ಸರ್ವೇ ನಂ.9ರಲ್ಲಿ ದಲಿತರಿಗಾಗಿ ಮೀಸಲಾದ ರುದ್ರಭೂಮಿಯನ್ನು ತಕ್ಷಣವೇ ದಲಿತ ಸಮುದಾಯಕ್ಕೆ ಹಸ್ತಾಂತರಿಸಿ, ಅಕ್ರಮ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ಜಿಲ್ಲಾ ಶಾಖೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಮನವಿ ಸಲ್ಲಿಸಿ ಮಾತನಾಡಿದ ಡಿಎಸ್ಎಸ್ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ, ಸುಮಾರು 15 ವರ್ಷಗಳ ಹಿಂದೆ ಸರ್ಕಾರವು ದಲಿತರ ರುದ್ರಭೂಮಿಗಾಗಿ 3 ಎಕರೆ ಜಮೀನನ್ನು ಖರೀದಿಸಿದ್ದು, ಅದು ಪ್ರಸ್ತುತ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಹೆಸರಿನಲ್ಲಿ ದಾಖಲಾಗಿರುವುದಾಗಿ ತಿಳಿಸಿದರು. ಈ ಜಮೀನನ್ನು ಪಾಹಣಿಯಲ್ಲಿ ಸ್ಪಷ್ಟವಾಗಿ ‘ದಲಿತರ ರುದ್ರಭೂಮಿ’ ಎಂದು ನಮೂದಿಸಿ, ಚಟ್ನಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಅಧಿಕೃತವಾಗಿ ಹಸ್ತಾಂತರಿಸಬೇಕೆಂದು ಒತ್ತಾಯಿಸಿದರು.
ಅಲ್ಲದೆ, ಈ ರುದ್ರಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಈಶಪ್ಪ ತಂ. ಬಸಣ್ಣಗೌಡ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಜಮೀನಿನ ಅಳತೆ ಕಾರ್ಯ ಪೂರ್ಣಗೊಳಿಸಿ ಚೆಕ್‌ಬಂದಿ ಮಾಡಿಸಿ, ಸುತ್ತಲು ಕಾಪೌಂಡ್ ಗೋಡೆ ನಿರ್ಮಿಸುವ ಮೂಲಕ ದಲಿತರ ಹಕ್ಕನ್ನು ರಕ್ಷಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಡಿಎಸ್ಎಸ್ ಜಿಲ್ಲಾ ಸಂಯೋಜಕರಾದ ಮರೆಪ್ಪ ಕ್ರಾಂತಿ, ಶಿವಲಿಂಗ ಹಾಸನಾಪುರ, ಶರಬಣ್ಣ ದೋರನಹಳ್ಳಿ, ಭೀಮಶಂಕರ ಗುಂಡಹಳ್ಳಿ, ದೊಡ್ಡಪ್ಪ ಕಾಡಿಂಗೇರ, ಸಂತೋಷ್ ಗುಂಡಹಳ್ಳಿ, ನಾಗರಾಜ್ ಕೋಡಮ್ಮನಹಳ್ಳಿ, ಮಲ್ಲು ಖಾನಾಪುರ, ನಿಂಗಪ್ಪ ಖಾನಾಪುರ ಸೇರಿದಂತೆ ಅನೇಕ ಡಿಎಸ್ಎಸ್ ಕಾರ್ಯಕರ್ತರು ಹಾಗೂ ಚಟ್ನಳ್ಳಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.







