ಯಾದಗಿರಿ | ಸೂರತ್–ಚೆನ್ನೈ ಎನ್‌ಎಚ್ 150ಸಿ ಕಾಮಗಾರಿಯಿಂದ ರೈತರಿಗೆ ತೊಂದರೆ : ಡಾ.ಭೀಮಣ್ಣ ಮೇಟಿ

ಯಾದಗಿರಿ: ಭಾರತಮಾಲಾ ಯೋಜನೆಯಡಿ ನಡೆಯುತ್ತಿರುವ ಸೂರತ್–ಚೆನ್ನೈ ಎನ್‌ಎಚ್ 150ಸಿ ಕಾಮಗಾರಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಭೀಮಣ್ಣ ಮೇಟಿ ಆರೋಪಿಸಿದ್ದಾರೆ.
ಬುಧವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಉಳ್ಳೆಸೂಗುರು ಸೇರಿದಂತೆ ಅನೇಕ ಗ್ರಾಮಗಳ ರೈತರ ಭೂಮಿಯನ್ನು ಪಡೆದುಕೊಂಡು ಪರಿಹಾರ ಹಣ ನೀಡದೇ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ದೂರಿದರು.
ರಸ್ತೆಯ ಎರಡು ಬದಿಗಳ ಸಂಪರ್ಕ ಮಾರ್ಗ ನಿರ್ಮಾಣವಾಗದೇ ಇರುವುದರಿಂದ ರೈತರು ತಮ್ಮ ಜಮೀನುಗಳಿಗೆ ತೆರಳಲು ಕಷ್ಟ ಅನುಭವಿಸುತ್ತಿದ್ದಾರೆ. ಗುಂಡಿಗಳು, ಪಿನ್ನಿಂಗ್ ಕೊರತೆಗಳಿಂದ ಜನ–ಜಾನುವಾರುಗಳ ಜೀವದಾನ ಅಪಾಯದಲ್ಲಿದೆ ಎಂದು ಹೇಳಿದರು.
ಕಾಮಗಾರಿಗೆ ಬೇಕಾದ ಮಣ್ಣನ್ನು ತೆಗೆದ ಸ್ಥಳಗಳಲ್ಲಿ ದೊಡ್ಡ ಗುಂಡಿಗಳು ಬಿಟ್ಟು ಹೋಗಿರುವುದರಿಂದ ಅಪಘಾತ ಭೀತಿ ಹೆಚ್ಚಾಗಿದೆ. ಯಾದಗಿರಿ–ಶಹಾಪುರ ಹಾಗೂ ಗ್ರಾಮೀಣ ರಸ್ತೆಗಳು ಭಾರೀ ವಾಹನ ಸಂಚಾರದಿಂದ ಹಾಳಾಗಿವೆ. ರಸ್ತೆ, ಕಾಲುವೆ ತುರ್ತು ದುರಸ್ತಿ ಮಾಡಬೇಕು. ಜಮೀನು ಕಳೆದುಕೊಂಡ ರೈತರ ಮಕ್ಕಳಿಗೆ ಪ್ರಮಾಣ ಪತ್ರ ನೀಡಿ, ಕುಟುಂಬದ ಒಬ್ಬರಿಗೆ ಸಿ ಅಥವಾ ಡಿ ಗ್ರೂಪ್ ಸರಕಾರಿ ಹುದ್ದೆ ನೀಡಬೇಕು ಎಂದು ಆಗ್ರಹಿಸಿದರು.
ಸರಕಾರ ಮತ್ತು ಇಲಾಖೆ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ರೈತರೊಂದಿಗೆ ತೀವ್ರ ಹೋರಾಟ ಆರಂಭಿಸುತ್ತೇವೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಶೇಕ್ ಇಮ್ರಾನ್, ಅಶೋಕ್ ವಾಟ್ಕರ್ ಉಪಸ್ಥಿತರಿದ್ದರು.







