ಯಾದಗಿರಿ | ಚೆನೈ–ಸೂರತ್ ಭಾರತಮಾಲಾ ಹೆದ್ದಾರಿ ಯೋಜನೆಗೆ ರೈತರ ವಿರೋಧ : ಉಮೇಶ್ ಮುದ್ನಾಳ್ ನೇತೃತ್ವದಲ್ಲಿ ಪ್ರತಿಭಟನೆ

ಯಾದಗಿರಿ: ಚೆನ್ನೈ–ಸೂರತ್ ಭಾರತಮಾಲಾ ಎಕ್ಸ್‌ಪ್ರೆಸ್ ಹೆದ್ದಾರಿ ಯೋಜನೆಗೆ ಸಂಬಂಧಿಸಿ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಡಿಮೆ ಬೆಲೆಗೆ ರೈತರ ಜಮೀನು ವಶಪಡಿಸಿಕೊಂಡಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದೀಗ ರೈತರೊಂದಿಗೆ ಚೆಲ್ಲಾಟ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಮಳಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಎಕರೆ ರೈತರ ಜಮೀನಿಗೆ ಹೋಗುವ ದಾರಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಆರಂಭದಲ್ಲಿ ಜಮೀನಿಗೆ ಹೋಗಲು ಸೂಕ್ತ ದಾರಿ (ಸರ್ವಿಸ್ ರಸ್ತೆ) ಕಲ್ಪಿಸುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು, ಇದೀಗ ಆ ಭರವಸೆಯನ್ನು ಮರೆತು ರೈತರ ಜಮೀನಿಗೆ ಯಾವುದೇ ಪ್ರವೇಶ ನೀಡದೆ ಕಾಂಪೌಂಡ್ ನಿರ್ಮಿಸುತ್ತಿದ್ದಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಮಸ್ಯೆಯನ್ನು ರೈತರು ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಅವರ ಗಮನಕ್ಕೆ ತಂದ ಬಳಿಕ, ಅವರು ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಸೇರಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಉಮೇಶ್ ಮುದ್ನಾಳ್ ಅವರು, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಹೆದ್ದಾರಿ ಅಧಿಕಾರಿಗಳು ಕೂಡಲೇ ರೈತರಿಗೆ ಸರ್ವಿಸ್ ರಸ್ತೆ ಕಲ್ಪಿಸಬೇಕು. ಇಲ್ಲದಿದ್ದರೆ ರೈತರೊಂದಿಗೆ ಸೇರಿ ಹೆದ್ದಾರಿ ಕಾಮಗಾರಿಯನ್ನು ತಡೆದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತರಾದ ನಿಂಗಪ್ಪ, ನಾಗಪ್ಪ, ಶಿವಪ್ಪ, ಮಲ್ಲಯ್ಯ, ಸುರೇಂದ್ರ, ಬಸಲಿಂಗಪ್ಪ, ದೇವರಾಜ ಗೌಡ, ಮುನಿಯಪ್ಪ ಗೌಡ, ಭೀಮಾಶಂಕರ, ಶರಣು, ಮುದುಕಪ್ಪ, ಹಣಮಂತ, ಮಲ್ಲು, ಬಸ್ಸು, ದೇವಪ್ಪ, ನಿಂಗಪ್ಪ, ಮಹೇಶ, ಭೀಮಣ್ಣ, ತಾಯಪ್ಪ, ದೇವೀಂದ್ರಪ್ಪ, ಬಸಪ್ಪ ರಡ್ಡಿ, ಮಲ್ಲಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.







