ಯಾದಗಿರಿ | ಜನಸ್ನೇಹಿ ಸಾರಿಗೆ ವ್ಯವಸ್ಥೆಗೆ ಪ್ರಥಮ ಆದ್ಯತೆ : ಎಂ.ವೈ.ಪಾಟೀಲ್

ಯಾದಗಿರಿ, ನ.12: ಸಾರ್ವಜನಿಕರ ದೈನಂದಿನ ಜೀವನದ ಜೀವಾಳದಂತಿರುವ ಸಾರಿಗೆ ಇಲಾಖೆ ಬಲಪಡಿಸುವುದರ ಜೊತೆಗೆ ಉತ್ತಮ ಜನಸ್ನೇಹಿ ಸಾರಿಗೆ ವ್ಯವಸ್ಥೆ ನೀಡಲು ಬೇಕಾದ ಸುಧಾರಣೆಗಳನ್ನು ಜಾರಿಗೆ ತರಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಕೆಕೆಆರ್‌ಟಿಸಿ ನೂತನ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್ ಹೇಳಿದ್ದಾರೆ.
ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮಂಗಳವಾರ ನಗರಕ್ಕೆ ಆಗಮಿಸಿದ್ದ ಅವರು, ಇಲ್ಲಿನ ಹೊಸ ಬಸ್ ನಿಲ್ದಾಣ ಸೇರಿದಂತೆಯೇ ವಿವಿಧಡೆ ನೇರವಾಗಿ ಪ್ರಯಾಣಿಕರನ್ನು ಮತ್ತು ಸಿಬ್ಬಂದಿಯನ್ನು ಭೇಟಿಯಾಗಿ ಅಹವಾಲುಗಳನ್ನು ಆಲಿಸಿ ಮಾತನಾಡಿದರು.
ರಸ್ತೆ, ಶಿಕ್ಷಣ, ಆರೋಗ್ಯ, ವಿದ್ಯುತ್ ಹೀಗೆ ಮನುಷ್ಯನಿಗೆ ಹೇಗೆ ಮುಖ್ಯವೋ ಅದೇ ರೀತಿಯಲ್ಲಿ ಸಂರ್ಪಕಕ್ಕಾಗಿ ಸಾರಿಗೆ ವ್ಯವಸ್ಥೆಯೂ ಅಷ್ಠೆ ಮುಖ್ಯವಾಗಿದೆ.ಈ ನಿಟ್ಟಿನಲ್ಲಿ ಪಕ್ಷ ಮತ್ತು ಸರಕಾರ ತಮಗೆ ನೀಡಿದ ಈ ಮಹತ್ವದ ಸ್ಥಾನದಿಂದ ಸಾಧ್ಯವಾದಷ್ಟು ಉತ್ತಮ ಕೆಲಸ ಮಾಡುವ ಮೂಲಕ ಕೆಕೆಆರ್‌ಟಿಸಿಗೊಂದು ಹೊಸ ರೂಪ ನೀಡಲು ಪ್ರಯತ್ನ ಮಾಡುವುದಾಗಿ ಪಾಟೀಲ್ ಹೇಳಿದರು.
ನೇರವಾಗಿ ಜನರ ಬಳಿ ತೆರಳಿದ ಪಾಟೀಲರು ಅಲ್ಲಿದ್ದ ಹಳ್ಳಿಗಳ ಪ್ರಯಾಣಿಕರನ್ನು ಮಾತನಾಡಿಸಿ,ಬಸ್ ಗಳ ವ್ಯವಸ್ಥೆ ಬಗ್ಗೆ ವಿಚಾರಿಸಿದರು. ಅನೇಕರು ಹೇಳಿದ್ದನ್ನು ಶಾಂತಚಿತ್ತವಾಗಿ ಆಲಿಸಿದ ಅವರು, ಪಕ್ಕದಲ್ಲಿಯೇ ಇದ್ದ ಅಧಿಕಾರಿಗಳಿಗೆ ಎಲ್ಲವನ್ನು ನೋಟ್ ಮಾಡಿಕೊಂಡು ಬಗೆಹರಿಸುವಂತೆಯೇ ಸೂಚಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪ ಮುಖ್ಯಯಾಂತ್ರಿಕ ಅಭಿಯಂತರ ರಾಜಗೋಪಾಲ ಪುರಾಣಿಕ, ವಿಭಾಗೀಯ ನಿಯಂತ್ರಣ ಅಧಿಕಾರಿ ಜಿ. ಬಿ. ಮಂಜುನಾಥ ಘಟಕ ವ್ಯವಸ್ಥಾಪಕರು ಮತ್ತು ಸಂಸ್ಥೆ ಅಧಿಕಾರಿ, ಸಿಬ್ಬಂದಿ ಮತ್ತು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಮುಖಂಡ ಪಂಪಣ್ಣಗೌಡ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಸಾರಿಗೆ ವ್ಯವಸ್ಥೆ ದೇಶದಲ್ಲೇ ಮಾದರಿಯಾಗಿದೆ. ಅದರಲ್ಲೂ ನಮ್ಮ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಜನಸ್ನೇಹಿ ಸಾರಿಗೆ ವ್ಯವಸ್ಥೆ ಹೊಂದಿದ್ದಕ್ಕಾಗಿ ಹತ್ತು ಹಲವು ರಾಷ್ಟ್ರೀಯ,ಅಂತರ್‌ರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಗಳು ಪಡೆದಿವೆ.
<ಅರುಣಕುಮಾರ ಪಾಟೀಲ್, ಅಧ್ಯಕ್ಷರು ಕೆಕೆಆರ್‌ಟಿಸಿ.







