ಯಾದಗಿರಿ | ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರ ನೇತೃತ್ವದಲ್ಲಿ ಪ್ರವಾಹ, ಬೆಳೆ ಹಾನಿ ಪರಿಶೀಲನೆ

ಯಾದಗಿರಿ : ಜಿಲ್ಲೆಯ ಬೆಳೆಹಾನಿ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಮಾಜಿ ಸಚಿವ ರಾಜೂಗೌಡ ಅವರು ಮಂಗಳವಾರ ಜಿಲ್ಲಾ ಬಿಜೆಪಿ ನಾಯಕರೊಂದಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.
ಜೇವರ್ಗಿ ತಾಲ್ಲೂಕಿನ ಸ್ಯಾದಿಪುರದಲ್ಲಿ ಹತ್ತಿ ಬೆಳೆ ನಾಶವಾದ ಹೊಲಗಳಿಗೆ ಭೇಟಿ ನೀಡಿದ ವಿಜಯೇಂದ್ರ ಅವರು ರೈತರ ದುಃಖವನ್ನು ಆಲಿಸಿ, “ಸಾಲ ಮಾಡಿ ಬಿತ್ತಿದ ಬೆಳೆ ಮಳೆಗೆ ನಾಶವಾಗಿದೆ ಎಂಬ ನಿಮ್ಮ ನೋವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅನ್ನದಾತರಾದ ನೀವು ಧೈರ್ಯ ಬೀಳಬೇಡಿ. ಸರಕಾರದ ಮೇಲೆ ಒತ್ತಡ ಹಾಕಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ಶ್ರಮಿಸುತ್ತದೆ,” ಎಂದು ಭರವಸೆ ನೀಡಿದರು.
ಛಲವಾದಿ ನಾರಾಯಣಸ್ವಾಮಿ ಅವರು ಕೂಡ ರೈತರಿಗೆ ಧೈರ್ಯ ತುಂಬಿ, “ನಿಮ್ಮ ಜೊತೆ ನಾವು ಇದ್ದೇವೆ, ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ ಎಂದು ಹೇಳಿದರು.
ನಾಯ್ಕಲ್ ಗ್ರಾಮದಲ್ಲಿ ಪ್ರವಾಹ ಪೀಡಿತರ ಸ್ಥಿತಿ ಪರಿಶೀಲನೆ :
ಅಲ್ಲಿಂದ ನಾಯ್ಕಲ್ ಗ್ರಾಮಕ್ಕೆ ಭೇಟಿ ನೀಡಿದ ತಂಡವು ಪ್ರವಾಹದಿಂದ ಹಾನಿಗೀಡಾದ ಮನೆಗಳನ್ನು ಪರಿಶೀಲಿಸಿತು. ಬಡವರು ಮನೆ ಕಳೆದುಕೊಂಡಿರುವುದನ್ನು ಕಂಡ ವಿಜಯೇಂದ್ರ ಅವರು ಜಿಲ್ಲಾಡಳಿತ ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.
ಮುಖ್ಯರಸ್ತೆ ಪಕ್ಕದ ಹೊಲಗಳಲ್ಲಿ ಹಾಳಾದ ಭತ್ತದ ಬೆಳೆಗಳನ್ನು ವೀಕ್ಷಿಸಿದ ನಾಯಕರು, ಇಷ್ಟೊಂದು ಹಾನಿಯಾದರೂ ಸರ್ಕಾರ ರೈತರ ನೆರವಿಗೆ ಬಂದಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯೇಂದ್ರ ಅವರು ಈ ವೇಳೆ ಮಾತನಾಡಿ, ಸರ್ಕಾರ ಕೂಡಲೇ ಹಸಿ ಬರಗಾಲ ಘೋಷಿಸಿ, ಪರಿಹಾರ ವಿತರಿಸುವ ಮೂಲಕ ರೈತರನ್ನು ಬದುಕಿಸಬೇಕು ಎಂದು ಆಗ್ರಹಿಸಿದರು.
ಬೆಂಡೆಗುಂಬಳ್ಳಿಯಲ್ಲಿಯೂ ಪ್ರವಾಹ ಹಾನಿ ಪರಿಶೀಲಿಸಿದ ನಾಯಕರು, ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಆಶ್ರಯ ಪಡೆದ ಶಿವಪುರದ ಗ್ರಾಮಸ್ಥರಿಂದ ಗ್ರಾಮ ಸ್ಥಳಾಂತರ ಮಾಡುವ ಮನವಿಯನ್ನೂ ಸ್ವೀಕರಿಸಿದರು.
ಈ ವೇಳೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಮಾಜಿ ಸಚಿವ ರಾಜುಗೌಡ ನಾಯಕ, ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ ಎಸ್ ಪಾಟೀಲ್ ನಡಹಳ್ಳಿ, ರಾಜ್ಯ ಕಾರ್ಯದರ್ಶಿ ಮತ್ತು ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪುರ, ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್, ಮಾಜಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ, ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ, ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ನಾಗರತ್ನ ಕುಪ್ಪಿ, ಚಂದ್ರಶೇಖರಗೌಡ ಮಾಗನೂರ, ದೇವಿಂದ್ರನಾಥ ನಾದ, ದೇವರಾಜ ನಾಯಕ ಉಳ್ಳೆಸೂಗುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಮತ್ತು ಪರುಶುರಾಮ ಕುರಕುಂದಿ ಹಾಗೂ ಮೆಲಪ್ಪ ಗುಳಗಿ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಸಿದ್ದಣ್ಣಗೌಡ ಕಾಡಂನೋರ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಸೊನ್ನದ ಮತ್ತು ಅಡಿವೆಪ್ಪ ಜಾಕ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಆರ್ ಸಾಹುಕಾರ, ರಾಜುಗೌಡ ಉಕ್ಕನಾಳ, ವೆಂಕಟರೆಡ್ಡಿ ಅಬ್ಬೆತೂಮಕುರ, ರಾಜಶೇಖರ್ ಕಾಡಂನೊರ, ಚಂದ್ರಶೇಖರ ಯಾಳಗಿ, ತಿರುಪತಿ ಹತ್ತಿಕಟ್ಟಿಗಿ, ಪರ್ವತರಡ್ಡಿಗೌಡ ಮಲ್ಹಾರ ಬೆಂಡಗೊಂಬಳ್ಳಿ, ಯಂಕಣ್ಣ ನಾಯಕ, ಗೋವಿಂದಪ್ಪ ಖಾನಾಪುರ, ಜಿಲ್ಲಾ ಮಾಧ್ಯಮ ಸಂಚಾಲಕ ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







