ಯಾದಗಿರಿ | ನಿಜ ಶರಣ ಅಂಬಿಗರ ಚೌಡಯ್ಯ ಪ್ರತಿಮೆ ಕಟ್ಟೆ ನಿರ್ಮಾಣಕ್ಕೆ ಚಾಲನೆ

ಯಾದಗಿರಿ: ಇಲ್ಲಿನ ಗಂಜ ವ್ಯಾಪ್ತಿಯ ಸ್ಥಳದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನಿಜ ಶರಣ ಅಂಬಿಗರ ಚೌಡಯ್ಯ ಅವರ ಪ್ರತಿಮೆಯ ಕಟ್ಟೆ ನಿರ್ಮಾಣ ಕಾರ್ಯಕ್ಕೆ ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದಿಂದ ಸರ್ವ ಪದಾಧಿಕಾರಿ ಮತ್ತು ಮುಖಂಡರ ಸಮ್ಮುಖದಲ್ಲಿ ರವಿವಾರ ಬೆಳಗ್ಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೋಸಿ, ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಅನಪುರ ಹಾಗೂ ಸಮಾಜದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಗರತ್ನ ಅನಪುರ ನೇತೃತ್ವದಲ್ಲಿ ಕಟ್ಟೆ ನಿರ್ಮಾಣದ ಸ್ಥಳಕ್ಕೆ ಧಾರ್ಮಿಕ ವಿಧಿವಿಧಾನದ ಮೂಲಕ ಪೂಜೆ ನೆರವೇರಿತು.
ಈ ವೇಳೆ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಅನಪುರ, ಸಮಾಜದ ಬಹುದಿನಗಳ ಬೇಡಿಕೆಗೆ ಕಾಲ ಕೂಡಿಬಂದಿದೆ. ಮೂರ್ತಿ ಸ್ಥಾಪಿಸುವುದರ ಜತೆಗೆ ಚೌಡಯ್ಯ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೋಸಿ ಮಾತನಾಡಿ, ಇಂದು ಕಟ್ಟೆ ಪೂಜೆ ನೆರವೇರಿಸಲಾಗಿದೆ. ಬರುವ ದಿನಗಳಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಅವರ ಮೂರ್ತಿ ಪ್ರತಿಷ್ಠಾಪನೆ ಅದ್ದೂರಿಯಾಗಿ ಮಾಡಲಾಗುವುದು ಎಂದು ಹೇಳಿದರು.
ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಅನಪುರ ಮಾತನಾಡಿ, 12 ನೇ ಶತಮಾನದ ಶರಣರಲ್ಲಿಯೇ ನಮ್ಮ ಸಮಾಜದ ಗುರು ನಿಜಶರಣ ಅಂಬಿಗರ ಚೌಡಯ್ಯ ಅವರು ದೊಡ್ಡ ಕ್ರಾಂತಿಕಾರಿ ವಚನಕಾರರಾಗಿದ್ದರು ಎಂದು ಹೇಳಿದರು.
ಈ ವೇಳೆ ಮುಖಂಡರಾದ ಮಹೇಶ ಅನಪೂರ್, ನಿಂಗಪ್ಪ ಜಾಲಗಾರ, ಮಲ್ಲು ಪೂಜಾರಿ, ರಾಜಪ್ಪಾ ಸೈದಾಪುರ್, ಮುದುಕಪ್ಪ ಚಾಮನಹಳ್ಳಿ, ಮಹೇಶ್ ಬಾಡ್ಯಾಳ್, ಅಯ್ಯಪ್ಪ ನಾಯಕೋಡಿ, ಬಸವರಾಜ್ ಕೊಲ್ಕರ್, ಮಲ್ಲಿಕಾರ್ಜುನ್ ಗಿರ್ಮಿಸಿ, ದುರ್ಗಪ್ಪ ಹನುಮನಗರ, ಸಮಾಜ ಹಿರಿಯರಾದ ಮರೆಪ್ಪಾ ಗೋಸಿ, ಸಿ.ಎಂ.ಪಟ್ಟೆದಾರ, ಸಣ್ಣ ಹಣಮಂತಪ್ಪ ಬಳಿಚಕ್ರ, ಶಂಕರ್ ಗೋಸಿ, ಮಹಾದೆವಪ್ಪ, ಗಣಪೂರ, ಶರಣಪ್ಪ ಮೋಟ್ನಳ್ಳಿ ಹೋನಗೆರಾ, ಭೀಮರೆಡ್ಡಿ ಎಸ್.ಯರಗೋಳ ಉಪಸ್ಥಿತರಿದ್ದರು.
ಜ.21 ರಂದು ಹಾಸ್ಟೆಲ್ ಆರಂಭ : ಗೋಸಿ
ಜಿಲ್ಲೆಯ ಕೋಲಿ, ಕಬ್ಬಲಿಗ ಸಮಾಜದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಲ್ಲಾ ಕೇಂದ್ರ ಸ್ಥಾನದ ಚಿತ್ತಾಪುರ ರಸ್ತೆಯ ಆರ್ ಟಿಒ ಕಚೇರಿ ಸಮೀಪದಲ್ಲಿ ಬರುವ ಜ.21ರಂದು ಹಾಸ್ಟೆಲ್ ಆರಂಭಿಸಲಾಗುವುದು ಎಂದು ಜಿಲ್ಲಾ ಕೋಲಿ, ಕಬ್ಬಲಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಗೋಸಿ ತಿಳಿಸಿದ್ದಾರೆ. ಅಂದು ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ಇರುವುದರಿಂದ ಆ ಶುಭಗಳಿಗೆಯಲ್ಲಿ ಸಮಾಜದ ಮಕ್ಕಳಿಗೆ ಅನುಕೂಲವಾಗಲು ಸಮಾಜದ ಜಿಲ್ಲಾ ಘಟಕವು ಮುಖಂಡರೊಂದಿಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದರು.







