ಯಾದಗಿರಿ | ಎಪಿಡಿ ಸಂಸ್ಥೆಯಿಂದ ಮೇಕೆಗಳ ವಿತರಣೆ

ಹುಣಸಗಿ: ವಿಕಲಚೇತನರಿಗೆ ಹೊರಗಡೆ ಹೋಗಿ ದುಡಿಯುವ ಸಾಮರ್ಥ್ಯ ಇಲ್ಲದಿರುವುದರಿಂದ ಅಂಥವರು ಮೇಕೆ ಮರಿಗಳನ್ನು ಸಾಕಿ ಜೀವನ ವೃದ್ಧಿಸಲು ಮೇಕೆಗಳನ್ನು ವಿತರಿಸಲಾಗುತ್ತಿದೆ ಎಂದು ಎಪಿಡಿ ಸಂಸ್ಥೆಯ ತಾಲೂಕು ಆಡಿನೇಟರ್ ಚೆನ್ನವೀರ ಹೇಳಿದರು.
ಪಟ್ಟಣದ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಎಪಿಡಿ ಸಂಸ್ಥೆಯ ಸ್ವಯಂ ಉದ್ಯೋಗ ಉತ್ತೇಜನ ಯೋಜನೆಯಡಿ ತಾಲೂಕಿನಾದ್ಯಾಂತ ವಿಕಲಚೇತನರಿಗೆ 15 ಮೇಕೆಗಳನ್ನು ವಿತರಿಸಿ ಮಾತನಾಡಿದ ಅವರು, ವಿಕಲಚೇತನರ ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸುವ ಉದ್ದೇಶದಿಂದ ಮೇಕೆಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆಯ ಮೂಲಕ ಫಲಾನುಭವಿಗಳು ಸ್ವಂತವಾಗಿ ಉದ್ಯೋಗ ಆರಂಭಿಸಿ, ಕುಟುಂಬದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಅವಕಾಶ ಸಿಗುತ್ತದೆ. ಮೇಕೆ ಸಾಕಾಣಿಕೆ ಒಂದು ಸುಲಭ ಹಾಗೂ ಲಾಭದಾಯಕ ಜೀವನೋಪಾಯವಾಗಿರುವುದರಿಂದ, ಈ ಸಹಾಯದ ಮೂಲಕ ವಿಕಲಚೇತನರು ದೀರ್ಘಕಾಲಿಕ ಆದಾಯವನ್ನು ರೂಪಿಸಿಕೊಳ್ಳಲು ಎಪಿಡಿ ಸಂಸ್ಥೆ ಸಹಕಾರ ನೀಡುತ್ತಿದೆ ಎಂದು ಹೇಳಿದರು.
ಈ ವೇಳೆ ಹುಣಸಗಿಯ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿಗಳನ್ನು ಕರೆಸಿ ಮೇಕೆ ಮರಿಗಳಿಗೆ ಇನ್ಸೂರೆನ್ಸ್ ಮಾಡಿಕೊಡಲಾಯಿತು. ಒಂದು ವರ್ಷದೊಳಗೆ ಮೇಕೆ ಮರಣ ಹೊಂದಿದರೆ ಅದನ್ನು ವೈದ್ಯಾಧಿಕಾರಿಗಳನ್ನು ಕರೆಸಿ ಮರಣೋತ್ತರ ಪರೀಕ್ಷೆ ಮಾಡಿಸಿ ಪ್ರಮಾಣ ಪತ್ರ ನೀಡಿದರೆ ಮತ್ತೊಂದು ಮೇಕೆ ಕೊಡುವ ಸೌಲಭ್ಯವನ್ನು ನಮ್ಮ ಎಪಿಡಿ ಸಂಸ್ಥೆಯಲ್ಲಿ ಅವಕಾಶವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಂತೇಶ್, ಬಿಬಿ ಹಾಜರ, ನಾಗರಾಜ, ರೇಣುಕಾ ಪೌಜದಾರ್, ಗುರು ಗುತ್ತೇದಾರ ಸೇರಿದಂತೆ ಇನ್ನಿತರರು ಇದ್ದರು.





