ಯಾದಗಿರಿ | ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಗೂಂಡಾಗಿರಿ ಹೆಚ್ಚಳ : ಹಣಮಂತ ಇಟಗಿ ಆರೋಪ

ಯಾದಗಿರಿ : ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದಲ್ಲಿ ಗೂಂಡಾಗಿರಿ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹಾಗೂ ನಗರಸಭೆ ಸದಸ್ಯ ಹಣಮಂತ ಇಟಗಿ ಆರೋಪಿಸಿದ್ದಾರೆ.
ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಘಟನೆಯಲ್ಲಿ ಕಾಂಗ್ರೆಸ್ ಶಾಸಕರ ಗನ್‌ಮ್ಯಾನ್ ಗುಂಡು ಹಾರಿಸಿ ಒಬ್ಬ ಕಾಂಗ್ರೆಸ್ ಕಾರ್ಯಕರ್ತನನ್ನು ಹತ್ಯೆ ಮಾಡಿರುವುದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಅಲ್ಲದೇ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮನೆ ಎದುರು ಗುಂಡು ಹಾರಿಸಿ ಮನೆಗೆ ಬೆಂಕಿ ಹಚ್ಚಲು ಯತ್ನಿಸಿರುವ ದೃಶ್ಯಗಳು ವಿಡಿಯೋ ಫುಟೇಜ್‌ಗಳಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದರೂ, ಸಂಬಂಧಪಟ್ಟವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ದೂರಿದರು.
ಈ ಎಲ್ಲ ಘಟನೆಗಳನ್ನು ಮರೆಮಾಚಿ, ಬಿಜೆಪಿ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರ ವಿರುದ್ಧ ಮಾತ್ರ ಪ್ರಕರಣ ದಾಖಲಿಸುವ ಮೂಲಕ ಕಾಂಗ್ರೆಸ್ ಸರ್ಕಾರ ತನ್ನ ಪಕ್ಷಪಾತಿ ಹಾಗೂ ಉದ್ಧಟನಾ ಆಡಳಿತವನ್ನು ತೋರಿಸುತ್ತಿದೆ ಎಂದು ಹಣಮಂತ ಇಟಗಿ ಕಿಡಿಕಾರಿದರು.
ಇದಲ್ಲದೆ, ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಅವರು ಸಾರ್ವಜನಿಕವಾಗಿ ಅವಾಚ್ಯ ಶಬ್ದ ಬಳಸಿ ಜೀವ ಬೆದರಿಕೆ ಹಾಕಿರುವ ಪ್ರಕರಣದಲ್ಲಿಯೂ ಸರ್ಕಾರ ಮೌನ ವಹಿಸಿದೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಬದಲು, ಸಂಬಂಧಿಸಿದ ಜಿಲ್ಲಾ ವರಿಷ್ಠಾಧಿಕಾರಿಯನ್ನು ಅಮಾನತು ಮಾಡುವ ಮೂಲಕ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಮತ್ತೊಂದೆಡೆ, ಬೀದರ್ ಜಿಲ್ಲೆಯಲ್ಲಿ ನಡೆದ ಕೆಡಿಪಿ ಸಭೆಯ ವೇಳೆ ಕಾಂಗ್ರೆಸ್ ಶಾಸಕೊಬ್ಬರು ಬಿಜೆಪಿ ಶಾಸಕರ ಮೇಲೆ ಗುಂಡಾ ವರ್ತನೆ ತೋರಿ ಹಲ್ಲೆಗೆ ಮುಂದಾದ ಘಟನೆ ಬಹಿರಂಗವಾಗಿದೆ. ಇಂತಹ ಗುಂಡಾ ಸ್ವಭಾವದ ಶಾಸಕರಿರುವ ಸರ್ಕಾರದಿಂದ ಜನಸಾಮಾನ್ಯರಿಗೆ ರಕ್ಷಣೆ ಸಿಗಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಕಾಂಗ್ರೆಸ್ ಸರ್ಕಾರ ಕೂಡಲೇ ಗುಂಡಾ ರಾಜಕಾರಣಕ್ಕೆ ಕಡಿವಾಣ ಹಾಕಬೇಕು ಎಂದು ಹಣಮಂತ ಇಟಗಿ ಆಗ್ರಹಿಸಿದರು.







