ಯಾದಗಿರಿಯಲ್ಲಿ ಅತಿವೃಷ್ಟಿ–ಪ್ರವಾಹ ಹಾನಿ ಸಮೀಕ್ಷೆ: ಕೇಂದ್ರ ಅಂತರ ಸಚಿವಾಲಯ ತಂಡದಿಂದ ಪರಿಶೀಲನೆ

ಯಾದಗಿರಿ : ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯ ಜಂಟಿ ನಿರ್ದೇಶಕ ಶ್ರೀ ಮಹೇಶ್ ಕುಮಾರ್ ಅವರ ನೇತೃತ್ವದ ಕೇಂದ್ರ ಅಂತರ ಸಚಿವಾಲಯದ ತಂಡವು ಮಂಗಳವಾರ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಸಂಭವಿಸಿದ ಬೆಳೆ ಮತ್ತು ಮೂಲಸೌಕರ್ಯ ಹಾನಿ ಕುರಿತು ಸಮೀಕ್ಷೆ ನಡೆಸಿತು.
ಈ ತಂಡದಲ್ಲಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಶ್ರೀಮತಿ ಹೊನ್ನಂಬಾ ಎಸ್. ಹಾಗೂ ಇಸ್ರೋ ಬಾಹ್ಯಾಕಾಶ ಇಲಾಖೆಯ ವಿಜ್ಞಾನಿ ಆಕಾಶ ಮೋಹನ್ ಸಹ ಭಾಗವಹಿಸಿದ್ದರು.
ಸಮೀಕ್ಷೆಗೆ ಮೊದಲು ಜಿಲ್ಲಾಡಳಿತವು 2025ರ ಮುಂಗಾರು ಹಂಗಾಮಿನಲ್ಲಿ ಉಂಟಾದ ಭಾರೀ ಮಳೆ ಹಾಗೂ ಭೀಮಾ ನದಿ ಪ್ರವಾಹದಿಂದಾದ ಬೆಳೆ ಮತ್ತು ಮೂಲಸೌಕರ್ಯ ಹಾನಿ ಕುರಿತು ತಂಡಕ್ಕೆ ಪೂರ್ವಭಾವಿ ಮಾಹಿತಿ ನೀಡಿತು. ನಂತರ ತಂಡವು ಭೀಮಾ ನದಿ ಸೇತುವೆ ವ್ಯಾಪ್ತಿಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಭತ್ತದ ಬೆಳೆಗಳನ್ನು ಪರಿಶೀಲಿಸಿತು. ಅಲ್ಲದೇ ನಾಯ್ಕಲ್ ಪ್ರದೇಶದಲ್ಲಿ ಹತ್ತಿ ಸೇರಿದಂತೆ ವಿವಿಧ ಬೆಳೆಗಳಿಗೆ ಉಂಟಾದ ಹಾನಿ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತು.
ಭೀಮಾ ನದಿ ತೀರದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಟ್ರಾನ್ಸ್‌ಫಾರ್ಮರ್‌ಗಳು, ವಿದ್ಯುತ್ ಕಂಬಗಳು ಹಾಗೂ ಇತರೆ ವಿದ್ಯುತ್ ಉಪಕರಣಗಳ ಹಾನಿ ಮತ್ತು ಬದಲಾವಣೆ ಕುರಿತು ಪರಿಶೀಲನೆ ನಡೆಸಲಾಯಿತು. ಜೊತೆಗೆ ಒಡಗೇರಾ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ಹಾನಿ ಹಾಗೂ ಭೀಮಾ ನದಿಯ ಮೇಲಿರುವ ಸೇತುವೆಯ ರಸ್ತೆ ಹಾಳಾದ ಕುರಿತು ಮತ್ತು ಕೈಗೊಳ್ಳಲಾದ ದುರಸ್ತಿ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಸಹಾಯಕ ಆಯುಕ್ತ ಶ್ರೀಧರ್ ಗೋಟುರ್, ಕೃಷಿ ಜಂಟಿ ನಿರ್ದೇಶಕ ರತೇಂದ್ರನಾಥ್ ಸುಗೂರ್, ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕೇಂದ್ರ ತಂಡಕ್ಕೆ ಜಿಲ್ಲಾಡಳಿತದಿಂದ ವರದಿ ಸಲ್ಲಿಕೆ :
ಕಳೆದ ಮುಂಗಾರು ಹಂಗಾಮಿನಲ್ಲಿ ಸಂಭವಿಸಿದ ಭಾರೀ ಮಳೆ ಹಾಗೂ ಭೀಮಾ ನದಿ ಪ್ರವಾಹದಿಂದಾದ ಬೆಳೆ ಮತ್ತು ಮೂಲಭೂತ ಸೌಕರ್ಯ ಹಾನಿಯ ಕುರಿತು ಅಧ್ಯಯನ ನಡೆಸಲು ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ಅಂತರ ಸಚಿವಾಲಯದ ತಂಡಕ್ಕೆ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ವಿವರವಾದ ವರದಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಜಂಟಿ ನಿರ್ದೇಶಕ ಮಹೇಶ್ ಕುಮಾರ್, ರಾಷ್ಟ್ರೀಯ ದೂರಸಂವೇದಿ ಕೇಂದ್ರ (ಎನ್‌ಆರ್‌ಎಸ್‌ಸಿ), ಇಸ್ರೋ ವಿಜ್ಞಾನಿ ಆಕಾಶ ಮೋಹನ್ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಮತ್ತು ಸಾಮಾಜಿಕ ಭದ್ರತೆ, ಪಿಂಚಣಿ ಆಯುಕ್ತಾಲಯ ಹಾಗೂ ಕಂದಾಯ ಇಲಾಖೆಯ ಆಯುಕ್ತರಾದ ಹೊನ್ನಂಬಾ ಎಸ್. ಅವರು ಉಪಸ್ಥಿತರಿದ್ದರು.
ಸಭೆಯಲ್ಲಿ ಹಾನಿಗೊಳಗಾದ ಪ್ರದೇಶಗಳ ಛಾಯಾಚಿತ್ರಗಳು, ಪತ್ರಿಕಾ ವರದಿಗಳು ಹಾಗೂ ಅಂಕಿ-ಅಂಶಗಳೊಂದಿಗೆ ಹಾನಿಯ ತೀವ್ರತೆಯನ್ನು ತಂಡದ ಗಮನಕ್ಕೆ ತರಲಾಯಿತು. 2025ರ ಸೆಪ್ಟೆಂಬರ್ ತಿಂಗಳಲ್ಲಿ ದಾಖಲೆ ಪ್ರಮಾಣದ ಮಳೆ ಹಾಗೂ ಭೀಮಾ ನದಿಗೆ ಒಳಹರಿವು–ಹೊರಹರಿವು ಸಂಭವಿಸಿದ್ದರಿಂದ ಜಲಾಶಯಗಳು, ಕೆರೆಗಳು, ಹಳ್ಳ-ಕೊಳ್ಳಗಳು ತುಂಬಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಭಾರೀ ಹಾನಿಯಾಗಿದೆ ಎಂದು ವಿವರಿಸಲಾಯಿತು.
ಜಿಲ್ಲೆಯಲ್ಲಿ ಶೇ. 34.63 ರಷ್ಟು ಬೆಳೆ ಹಾನಿ ಸಂಭವಿಸಿದ್ದು, ಒಟ್ಟು 1.12 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. ಇದರಿಂದ 1.22 ಲಕ್ಷ ರೈತರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಮಾರ್ಗಸೂಚಿಯಂತೆ ಹಾಗೂ ರಾಜ್ಯ ಸರ್ಕಾರದ ಹೆಚ್ಚುವರಿ ಪರಿಹಾರ ಸೇರಿ ಒಟ್ಟು ರೂ. 219.61 ಕೋಟಿಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.
ಮಳೆಯಿಂದ 498 ಮನೆಗಳು ಹಾನಿಗೊಳಗಾಗಿದ್ದು, ಪರಿಹಾರ ವಿತರಿಸಲಾಗಿದೆ. ಅಲ್ಲದೇ ರಸ್ತೆ, ಸೇತುವೆ, ಅಂಗನವಾಡಿ, ಆರೋಗ್ಯ ಕೇಂದ್ರ, ಕುಡಿಯುವ ನೀರಿನ ಮೂಲ, ವಿದ್ಯುತ್ ವ್ಯವಸ್ಥೆ, ಕೆರೆ, ಶಾಲೆ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳಿಗೆ ಒಟ್ಟು ರೂ. 102 ಕೋಟಿಗಳಷ್ಟು ಹಾನಿಯಾಗಿದೆ ಎಂದು ತಂಡಕ್ಕೆ ತಿಳಿಸಲಾಯಿತು.
ಬೆಳೆ ಹಾನಿಯ ಸಮೀಕ್ಷೆಯನ್ನು ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿರುವುದಾಗಿ ಹಾಗೂ ಪರಿಹಾರವನ್ನು ಡಿಬಿಟಿ ಮೂಲಕ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ವಿವರಿಸಲಾಯಿತು.
ಜಿಲ್ಲೆಯಲ್ಲಿ ಈ ವರ್ಷ ದಾಖಲೆ ಪ್ರಮಾಣದ ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿಯ ವರದಿಯನ್ನು ಪರಿಗಣಿಸಿ ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ಮಂಜೂರು ಮಾಡುವಂತೆ ಕೇಂದ್ರ ತಂಡಕ್ಕೆ ಜಿಲ್ಲಾಡಳಿತ ಮನವಿ ಮಾಡಿತು.
ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







