ಯಾದಗಿರಿ | ತುಮಕೂರು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ : ಗ್ರಾಮ ಪಂಚಾಯತ್ ನಿರ್ಲಕ್ಷ್ಯ

ಯಾದಗಿರಿ : ಜಿಲ್ಲೆಯ ವಡಗೇರ ತಾಲ್ಲೂಕಿನ ತುಮಕೂರು ಗ್ರಾಮದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಕೈಗೊಳ್ಳಬೇಕಾದ ಮೂಲಭೂತ ಅಭಿವೃದ್ಧಿ ಕಾರ್ಯಗಳು ನಡೆಯದೆ ಇರುವುದರಿಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಅಧ್ಯಕ್ಷರ ನಿರ್ಲಕ್ಷ್ಯದ ಪರಿಣಾಮವಾಗಿ ಗ್ರಾಮದಲ್ಲಿನ ಹಲವು ಪ್ರಮುಖ ರಸ್ತೆಗಳು ಮತ್ತು ಚರಂಡಿಗಳ ಸ್ಥಿತಿ ಹದಗೆಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ದಿನನಿತ್ಯದ ಓಡಾಟದಲ್ಲಿ ತೀವ್ರ ತೊಂದರೆ ಉಂಟಾಗುತ್ತಿದೆ ಎನ್ನಲಾಗಿದೆ.
ವೀರಭದ್ರ ಗುಡಿಯಿಂದ ಅಗಸಿವರೆಗೆ ಹಾಗೂ ಮುರುಗಿ ಬಸವಣ್ಣ ಗುಡಿಯಿಂದ ಸಂಕಿನ್ ಸಿದ್ದಪ್ಪ ಪೂಜಾರಿ ಮನೆವರೆಗೆ ಇರುವ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಚರಂಡಿ ವ್ಯವಸ್ಥೆಯ ಕೊರತೆಯಿಂದ ಮಳೆ ನೀರು ನಿಂತು ಸಮಸ್ಯೆ ಉಂಟಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಹಿನ್ನೆಲೆ ಪರಿಸ್ಥಿತಿಗೆ ಬೇಸತ್ತ ಗ್ರಾಮದಲ್ಲಿನ ವೃದ್ಧರಾದ ಖಾಸಿಂ ಅಲಿ ಸಾಬ್ ಅವರು, ಪಂಚಾಯತ್ ಕೈಗೊಳ್ಳಬೇಕಾದ ಸಾರ್ವಜನಿಕ ಕೆಲಸವನ್ನು ತಮ್ಮ ಸ್ವಂತ ಹಣ ಖರ್ಚು ಮಾಡಿ ಕಾರ್ಮಿಕರನ್ನು ನೇಮಿಸಿ ಚರಂಡಿ ತೆಗೆಯುವ ಕಾರ್ಯ ಕೈಗೊಂಡಿದ್ದಾರೆ.
ಒಬ್ಬ ವೃದ್ಧರು ಪಂಚಾಯತ್ ಮಾಡಬೇಕಾದ ಸಾರ್ವಜನಿಕ ಕೆಲಸವನ್ನು ಸ್ವಂತ ವೆಚ್ಚದಲ್ಲಿ ಮಾಡಿಸಿರುವುದು ಗ್ರಾಮದಲ್ಲಿ ಚರ್ಚೆಗೆ ಕಾರಣವಾಗಿದ್ದು, ತುಮಕೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು ಹಾಗೂ ಸದಸ್ಯರ ಕಾರ್ಯನಿರ್ವಹಣೆಯ ಬಗ್ಗೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.







