ಯಾದಗಿರಿ | ಜಿಲ್ಲಾಡಳಿತ–ಸಾರ್ವಜನಿಕರ ನಡುವೆ ಸಂವಹನ ಕೊರತೆ: ಕರವೇ ಜಿಲ್ಲಾಧ್ಯಕ್ಷ ಭೀಮುನಾಯಕ ಆರೋಪ

ಯಾದಗಿರಿ: ಸಾರ್ವಜನಿಕರೊಂದಿಗೆ ಜಿಲ್ಲಾಡಳಿತದ ಸಂಪರ್ಕ ಮತ್ತು ಸಂವಹನ ಕಡಿಮೆಯಾಗಿರುವುದರಿಂದ ಜನರು ಹಾಗೂ ಅಧಿಕಾರಿಗಳ ನಡುವೆ ದೊಡ್ಡ ಅಂತರ ಉಂಟಾಗಿ ಜಿಲ್ಲೆಯಲ್ಲಿ ಅಕ್ರಮಗಳು ಹಾಗೂ ಅರಾಜಕತೆ ಹೆಚ್ಚಲು ಕಾರಣವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಆರೋಪಿಸಿದರು.
ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಸಭೆಗೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿಂದೆ ಜಿಲ್ಲಾಡಳಿತವು ಸಂಘ ಸಂಸ್ಥೆಗಳೊಂದಿಗೆ ಸಭೆ ನಡೆಸಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿತ್ತು. ಆದರೆ ಇತ್ತೀಚೆಗೆ ಇಂತಹ ಸಭೆಗಳು ನಡೆಯದ ಕಾರಣ ಸಂವಹನದ ಕೊರತೆ ಉಂಟಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಜನಪ್ರತಿನಿಧಿಗಳೂ ಸಾಥ್ ನೀಡುತ್ತಿರುವಂತೆ ಕಾಣುತ್ತಿದೆ. ಸಂಘ ಸಂಸ್ಥೆಗಳ ಅಭಿಪ್ರಾಯಗಳನ್ನು ಪರಿಗಣಿಸದೇ ದಿವ್ಯ ನಿರ್ಲಕ್ಷ್ಯ ತೋರಿರುವುದರಿಂದ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಟೀಕಿಸಿದರು.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ನಗರದಲ್ಲಿ ‘ಸ್ಪಾ’ ಹೆಸರಿನಲ್ಲಿ ಮಸಾಜ್ ಕೇಂದ್ರಗಳ ಮೂಲಕ ಇಸ್ಪೀಟ್ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ಸಂಬಂಧಿತ ಇಲಾಖೆಗಳ ಅನುಮತಿ ಇಲ್ಲದೇ ಇಂತಹ ಧಂದೆಗಳು ನಡೆಯುತ್ತಿದ್ದರೂ ಅಧಿಕಾರಿಗಳು ಜಾಣಕುರುಡುತನ ತೋರಿಸುತ್ತಿದ್ದಾರೆ. ಇಂತಹ ಅಕ್ರಮಗಳನ್ನು ತಡೆಯಲು ಜಿಲ್ಲಾಡಳಿತವು ಜನರು ಹಾಗೂ ಸಂಘ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವುದು ಅಗತ್ಯ ಎಂದು ಹೇಳಿದರು.
ಕರವೇ ಕಾರ್ಯಕರ್ತರು ಇಂತಹ ಅಕ್ರಮಗಳ ವಿರುದ್ಧ ದನಿ ಎತ್ತಬೇಕು. ಜೊತೆಗೆ ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ರೂಪಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಮಟ್ಟದಲ್ಲಿ ಸಂಘಟನೆ ಬಲಪಡಿಸಲು ಕಾರ್ಯಕರ್ತರು ಮುಂದಾಗಬೇಕು. ತಾಲ್ಲೂಕು ಹಾಗೂ ಗ್ರಾಮ ಮಟ್ಟದ ಸಮಸ್ಯೆಗಳನ್ನು ಜಿಲ್ಲಾ ಮಟ್ಟಕ್ಕೆ ಕೊಂಡೊಯ್ದು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ನಾಡು-ನುಡಿ ರಕ್ಷಣೆಗೆ ಸದಾ ಸಿದ್ಧರಿರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕರೆ :
ಮಾರ್ಚ್ 29ರಂದು ಬೆಂಗಳೂರಿನಲ್ಲಿ ಕರವೇ ವತಿಯಿಂದ ಕರ್ನಾಟಕ ಪದ್ಮಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅಲ್ಲದೇ ಜೂನ್ 10ರಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರ ಹುಟ್ಟುಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಇವುಗಳಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ತಿಳಿಸಿದರು.
ಪದಾಧಿಕಾರಿಗಳ ನೇಮಕ :
ಈ ಸಂದರ್ಭದಲ್ಲಿ ದಿಲಿಪ್ ಕುಮಾರ ಸೈದಾಪೂರ (ಜಿಲ್ಲಾ ಉಪಾಧ್ಯಕ್ಷ), ಶರಣಪ್ಪ ತಿಂಥಿಣಿ (ಸಂಚಾಲಕರು), ಭೀಮಾಶಂಕರ ಹತ್ತಿಕುಣಿ (ಯುವ ಘಟಕದ ಜಿಲ್ಲಾಧ್ಯಕ್ಷ), ನಿಂಗಪ್ಪ ಗುಡಗುಡಿ (ರೈತ ಘಟಕದ ಜಿಲ್ಲಾಧ್ಯಕ್ಷ) ಸೇರಿದಂತೆ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಸಭೆಯಲ್ಲಿ ಸಂತೋಷ ಕುಮಾರ ನಿರ್ಮಲಕರ್, ಮಲ್ಲು ಮಾಳಿಕೇರಿ, ಅಂಬ್ರೇಷ್ ಹತ್ತಿಮನಿ, ಅಬ್ದುಲ್ ಚಿಗಾನೂರ, ಶರಣಬಸಪ್ಪ ಯಲ್ಹೇರಿ, ವೆಂಕಟೇಶ ನಾಯಕ ಬೈರಿಮಡ್ಡಿ, ಚೆನ್ನಬಸಪ್ಪ ತಳವಾರ, ಅಂಬ್ರೇಷ್ ಕಟ್ಟಿಮನಿ, ವಿಶ್ವರಾಜ ಪಾಟೀಲ್, ಸಿದ್ದಪ್ಪ ಕ್ಯಾಸಪನಳ್ಳಿ, ಭೀಮರಾಯ ರಾಮಸಮುದ್ರ, ಅನಿಲ್ ದಾಸನಕೇರಿ, ವಿಜಯಕುಮಾರ ರಾಠೋಡ, ಬಸವರಾಜ ಜಗನ್ನಾಥ, ಅಶೋಕ ನಾಯಕ, ಹಣಮಂತ ತೇಕರಾಳ, ಸುರೇಶ ಬೆಳಗುಂದಿ, ಮಲ್ಲಿಕಾರ್ಜುನ ಕನ್ನಡಿ, ಮಹೇಶ ಠಾಣಗುಂದಿ, ಸೈದಪ್ಪ ಬಾಂಬೆ, ಸಾಗರ ಹುಲೆರಿ, ಮೌನೇಶ ಮಾಧ್ವಾರ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ವಿವಿಧ ಪದಾಧಿಕಾರಿಗಳು ಇದ್ದರು.







