ಯಾದಗಿರಿ | ಮಸಕನಹಳ್ಳಿಯಲ್ಲಿ ಚಿರತೆ ಸಂಚಾರ : ಗ್ರಾಮಸ್ಥರಲ್ಲಿ ಭೀತಿ

ಯಾದಗಿರಿ: ತಾಲೂಕಿನ ಮಸಕನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ಗ್ರಾಮಸ್ಥರ ಜೀವನದಲ್ಲಿ ಆತಂಕ ಮನೆಮಾಡಿದೆ. ಕಳೆದ ಎಂಟು ದಿನಗಳಿಂದ ಈ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಚಿರತೆ, ಕಳೆದ ನಾಲ್ಕು ತಿಂಗಳಲ್ಲಿ ಅನೇಕ ಮೇಕೆ ಮತ್ತು ಹಸುಗಳನ್ನು ಬಲಿ ತೆಗೆದುಕೊಂಡಿದೆ ಎಂದು ಸ್ಥಳೀಯರು ದೂರಿದ್ದಾರೆ.
ಗ್ರಾಮದ ಸುತ್ತಲಿನ ಗುಡ್ಡಗಾಡು ಪ್ರದೇಶಗಳು ಈ ಮೃಗಗಳ ಸಂಚಾರಕ್ಕೆ ಅನುಕೂಲವಾಗಿರುವುದರಿಂದ ಇಂತಹ ಘಟನೆಗಳು ಸಹಜವಾದರೂ, ಇತ್ತೀಚಿನ ದಾಳಿಗಳು ಗ್ರಾಮಸ್ಥರಲ್ಲಿ ಭೀತಿಯನ್ನು ಉಂಟುಮಾಡಿವೆ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಈ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಚಿರತೆ ಆಕಳಿನ ಮೇಲೆ ದಾಳಿ ಮಾಡಿದ ಮಾಹಿತಿ ತಿಳಿಯುತ್ತಿದ್ದಂತೆಯೇ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಸ್ಥಳಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಜಾಗೃತಿ ಮೂಡಿಸಿದರು. ಅವರು ತಮಟೆ ಬಾರಿಸಿ ಗ್ರಾಮಸ್ಥರಲ್ಲಿ ಎಚ್ಚರಿಕೆಯನ್ನು ಮೂಡಿಸಿದರು ಹಾಗೂ ಬಳಿಯ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ರೈತರು ಈಗಾಗಲೇ ನಿರಂತರ ಮಳೆಯಿಂದಾಗಿ ಬೆಳೆ ಹಾನಿಯಿಂದ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲೂ ಚಿರತೆ ದಾಳಿ ಮತ್ತಷ್ಟು ಆತಂಕ ಉಂಟುಮಾಡಿದೆ. ಗ್ರಾಮಸ್ಥರು ತಮ್ಮ ಜಮೀನುಗಳಿಗೆ ಒಬ್ಬರೇ ತೆರಳಬಾರದು, ಗುಂಪಿನಲ್ಲಿ ತೆರಳಬೇಕು ಎಂದು ಎಚ್ಚರಿಕೆ ನೀಡಿದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ರೀತಿಯ ಸ್ಪಂದನೆ ನೀಡದೇ, “ಅರ್ಜಿ ಕೊಡಿ” ಎಂಬ ತಳ್ಳುಮಾತು ನೀಡುತ್ತಿದ್ದಾರೆ ಎಂಬ ಆರೋಪ ಮಾಡಿದರು.
ತಕ್ಷಣವೇ ಅಧಿಕಾರಿಗಳು ಗ್ರಾಮ ಸುತ್ತಲಿನ ಗುಡ್ಡಗಾಡು ಪ್ರದೇಶದಲ್ಲಿ ಬೋನು ಇಟ್ಟು ಚಿರತೆಯನ್ನು ಸೆರೆ ಹಿಡಿಯಬೇಕು. ನಿರ್ಲಕ್ಷ್ಯ ಮುಂದುವರೆದರೆ ರಾಮಸಮುದ್ರ ಗ್ರಾಮದಲ್ಲಿ ವಿಜಯಪುರ–ಹೈದರಾಬಾದ್ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಆಂಜನೇಯ, ಭಜಂತ್ರಿ, ರಫೀಕ್, ಸುರೇಶ್, ಫಕೀರ್ ಸಾಬ್, ಹಣಮಂತ, ದೇವಿಂದ್ರಪ್ಪ, ಶಬೀರ್, ಗೌಸ್ ಪಟ್ಟೇಲ್, ಕಾಶಮ್ಮ, ದಂಡಮ್ಮ, ನಾಗಮ್ಮ, ವಲ್ಲಿ ರಫೀಕ್, ಶೀವರೆಡ್ಡಿ, ಭೀಮರಾಯ, ಮರಗಪ್ಪ, ಮೈಬುಸಾಬ್, ಶರಣಪ್ಪ, ಪವನ್, ಮಂಜು ಸೇರಿದಂತೆ ಗ್ರಾಮಸ್ಥರು, ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.







