ಯಾದಗಿರಿ | ಯುವಜನತೆ ಸ್ವತಂತ್ರ ಆಲೋಚನೆ, ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಲಿ: ಡಾ.ಜಿ.ಶಶಿಕುಮಾರ್

ಯಾದಗಿರಿ: ದೇಶದ ಯುವಜನತೆ ಸ್ವತಂತ್ರವಾಗಿ ಆಲೋಚಿಸುವ ಹಾಗೂ ಸಮಾಜದಲ್ಲಿನ ತಪ್ಪುಗಳನ್ನು ಪ್ರಶ್ನಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು" ಎಂದು ಎಐಡಿವೈಓ (AIDYO) ಅಖಿಲ ಭಾರತ ಉಪಾಧ್ಯಕ್ಷರಾದ ಡಾ.ಜಿ.ಶಶಿಕುಮಾರ್ ಅವರು ಕರೆ ನೀಡಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ (ಜ.18) ಎಐಡಿವೈಓ 60ನೇ ಸಂಸ್ಥಾಪನಾ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವಜನರ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ, ‘ತಾರುಣ್ಯದ ತಲ್ಲಣಗಳು: ಬಗೆಹರಿಸಿಕೊಳ್ಳುವ ಬಗೆ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಭಾರತದಲ್ಲಿ ಇಂದು 60 ಕೋಟಿಗೂ ಅಧಿಕ ಯುವಜನರಿದ್ದಾರೆ. ಆದರೆ, ಈ ಬೃಹತ್ ಮಾನವ ಶಕ್ತಿಯನ್ನು ಸಮಾಜದ ಪ್ರಗತಿಗೆ ಬಳಸಿಕೊಳ್ಳುವಲ್ಲಿ ಆಳುವ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಯುವಜನರನ್ನು ಕುಡಿತ, ಮಾದಕ ವ್ಯಸನ ಹಾಗೂ ಅಶ್ಲೀಲ ಸಾಹಿತ್ಯದತ್ತ ತಳ್ಳಲಾಗುತ್ತಿದೆ. ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಜಾತಿ-ಕೋಮು ಆಧಾರದಲ್ಲಿ ಯುವಕರನ್ನು ವಿಭಜಿಸುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸಮಾಜದಲ್ಲಿನ ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದ ಅವರು, ಯೌವನದ ಭಾವನೆಗಳನ್ನು ಪ್ರಬುದ್ಧತೆಯಿಂದ ನಿರ್ವಹಿಸಬೇಕು. ಪ್ರೀತಿ-ಪ್ರೇಮವು ಕೇವಲ ಆಕರ್ಷಣೆಯಾಗಿರದೆ, ಪರಸ್ಪರ ಗೌರವ ಹಾಗೂ ಘನತೆಯಿಂದ ಕೂಡಿರಬೇಕು. ನಿರಂತರ ಅಧ್ಯಯನದ ಮೂಲಕ ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಐಡಿವೈಓ ರಾಜ್ಯ ಅಧ್ಯಕ್ಷ ಶರಣಪ್ಪ ಉದ್ಬಾಳ್ ಅವರು ‘ಕ್ರಾಂತಿಕಾರಿಗಳು ಕಂಡ ಕನಸಿನ ಭಾರತ’ ವಿಷಯದ ಕುರಿತು ಮಾತನಾಡಿ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ ಆಜಾದ್ ಸೇರಿದಂತೆ ಅನೇಕ ಕ್ರಾಂತಿಕಾರಿಗಳು ಶೋಷಣಾರಹಿತ ಸಮಾಜದ ಕನಸು ಕಂಡಿದ್ದರು. ಆ ಕನಸನ್ನು ನನಸಾಗಿಸಲು ಯುವಜನರು ಸಂಘಟಿತರಾಗಬೇಕು ಎಂದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿದರು.
ಸ್ಥಳೀಯ ಸದಸ್ಯರಾದ ಎಂ.ಎಸ್.ಕೋಟಗೇರಾ, ಮಲ್ಲು ರಾಂಪುರ, ವೆಂಕಟೇಶ್ ಕೆ., ಮಲ್ಲೇಶ್ ಕೊಂಕಲ್, ಮಾರುತಿ, ರಮೇಶ್, ನರಸಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.







