ಯಾದಗಿರಿ | ಮೂಢನಂಬಿಕೆ ಅಳಿಸಿ ವೈಜ್ಞಾನಿಕ ಮನೋಭಾವ ಬೆಳೆಸೋಣ: ಡಾ.ದಾಕ್ಷಾಯಣಿ ಎಸ್.ಅಪ್ಪ

ಯಾದಗಿರಿ: ಮೂಢನಂಬಿಕೆಗಳನ್ನು ಅಳಿಸಿ ಸಮಾಜದಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವ ಉದ್ದೇಶದೊಂದಿಗೆ ಆಯೋಜಿಸಿದ್ದ ಈ ಕಾರ್ಯಕ್ರಮ ಅಪೂರ್ವ ಹಾಗೂ ಅರ್ಥಪೂರ್ಣವಾಗಿದೆ ಎಂದು ಶರಣಬಸವೇಶ್ವರ ಸಂಸ್ಥಾನದ ಡಾ.ದಾಕ್ಷಾಯಣಿ ಎಸ್. ಅಪ್ಪ ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶಯ ನುಡಿಗಳನ್ನಾಡಿದ ಅವರು, ಉತ್ತಮ ಹಾಗೂ ಅರ್ಥಪೂರ್ಣ ಉಪನ್ಯಾಸಗಳೊಂದಿಗೆ ಪುರುಷ ಮತ್ತು ಸ್ತ್ರೀ ಸಾಧಕರನ್ನು ಸನ್ಮಾನಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾನವನು ಯಾವುದೇ ಕಾರ್ಯ ಕೈಗೊಳ್ಳುವ ಮುನ್ನ ಸೂಕ್ತವಾಗಿ ವಿಚಾರ ಮಾಡಬೇಕು ಎಂಬ ಬಸವಣ್ಣರ ನುಡಿಯನ್ನು ಸ್ಮರಿಸಿದ ಅವರು, ವೈಜ್ಞಾನಿಕ ಚಿಂತನೆಯಿಂದಲೇ ಯಾವುದು ಸರಿಯು, ಯಾವುದು ತಪ್ಪು ಎಂಬ ವಿವೇಕ ಮೂಡುತ್ತದೆ ಎಂದರು. ಮೂಢನಂಬಿಕೆ ಮತ್ತು ಅಪನಂಬಿಕೆಗಳನ್ನು ಹೊಡೆದೋಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಈ ಕಾರ್ಯಕ್ರಮ ಪರಿಣಾಮಕಾರಿಯಾಗಿ ಮಾಡಿದೆ ಎಂದು ಹೇಳಿದರು.
ವಿಜ್ಞಾನವನ್ನು ಮಾನವನ ಕಲ್ಯಾಣ, ಪರಿಸರ ಸಂರಕ್ಷಣೆ, ಆರೋಗ್ಯ ರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಬಳಸಬೇಕು. ಮಾನವೀಯ ಮೌಲ್ಯಗಳೊಂದಿಗೆ ವಿಜ್ಞಾನವನ್ನು ಬೆಳೆಸಿದಾಗ ಮಾತ್ರ ಸಮಾಜ ಸರ್ವಾಂಗೀಣವಾಗಿ ಅಭಿವೃದ್ಧಿಯಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಇಂತಹ ವೈಜ್ಞಾನಿಕ ಚಿಂತನೆಗೆ ಉತ್ತೇಜನ ನೀಡುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಆಗ ಮಾತ್ರ ವೈಜ್ಞಾನಿಕ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು.





