ಯಾದಗಿರಿ | ಭಗವಾನ್ ವಿಶ್ವಕರ್ಮ ಜಯಂತಿ ಆಚರಣೆ

ಯಾದಗಿರಿ: ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ವಿಶ್ವನಾಥ ರೆಡ್ಡಿ ಸಭಾಂಗಣದಲ್ಲಿ ಭಗವಾನ್ ವಿಶ್ವಕರ್ಮ ಜಯಂತಿ ಆಚರಣೆ ನಡೆಯಿತು.
ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ, ಆನೆಗುಂದಿ ಸರಸ್ವತಿ ಪೀಠಾಧಿಪತಿ ಕುಮಾರ ಮಹಾಸ್ವಾಮಿಗಳು ಹಾಗೂ ಜಿಲ್ಲಾಧ್ಯಕ್ಷ ಮಹೇಶ ವಿಶ್ವಕರ್ಮ ಉದ್ಘಾಟಿಸಿದರು.
ಆನೆಗುಂದಿ ಪೀಠಾಧಿಪತಿ ಕುಮಾರ ಮಹಾಸ್ವಾಮಿಗಳು ಮಾತನಾಡಿ, ವಿಶ್ವಕ್ಕೆ ಸುಂದರ ರೂಪ ನೀಡಿದ ಮಹಾನ್ ಶಿಲ್ಪಿಗಳು ವಿಶ್ವಕರ್ಮರು. ಯಾವುದೇ ವಸ್ತುವಿಗೆ ಆಕೃತಿ, ರೂಪ ನೀಡುವಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ಪ್ರಶಂಸಿಸಿದರು.
ಸಾಹಿತಿ ವೆಂಕಟೇಶ ಕಲಕಂಬ ಉಪನ್ಯಾಸ ನೀಡಿ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ನೇತೃತ್ವದಲ್ಲಿ ಬೇಲೂರು, ಹಳೇಬೀಡು, ಬಾದಾಮಿ, ಪಟ್ಟದಕಲ್ಲು ಸೇರಿದಂತೆ ಅನೇಕ ದೇವಾಲಯಗಳು ವಿಶ್ವವಿಖ್ಯಾತವಾಗಿವೆ. ವಾಸ್ತುಶಿಲ್ಪ ಕಲೆಯ ಮೂಲಕ ಭಾರತಕ್ಕೆ ಹೆಸರು ತಂದದ್ದು ವಿಶ್ವಕರ್ಮ ಸಮುದಾಯ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಮಹೇಶ ವಿಶ್ವಕರ್ಮ ಮಾತನಾಡಿ, ಚಿನ್ನ, ಬೆಳ್ಳಿ, ಮರ, ಕಬ್ಬಿಣ, ಶಿಲ್ಪಕಲೆ ಸೇರಿದಂತೆ ಪಂಚಲೋಹಗಳ ಕಸುಬಿನಲ್ಲಿ ವಿಶ್ವಕರ್ಮ ಸಮುದಾಯ ಅಪಾರ ಕೊಡುಗೆ ನೀಡಿದೆ. ದೇವರಿಗೆ ಅಸ್ತ್ರ, ರಥಗಳನ್ನು ಸಿದ್ಧಪಡಿಸಿದ ವಿಶ್ವಕರ್ಮರ ಕೌಶಲ ಇಂದಿನ ಯುವಕರಿಗೆ ಮಾದರಿಯಾಗಿದೆ. ಸಮಾಜವು ಶೈಕ್ಷಣಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಇನ್ನಷ್ಟು ಮುಂದೆ ಬರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ 2024–25ರ ಎಸೆಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಸಮುದಾಯದ ಸಾಧಕರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಶೋಕ ಚಂಡ್ರಕಿ, ರಮೇಶ ವಿಶ್ವಕರ್ಮ ಹತ್ತಿಕುಣಿ, ನಿಂಗಣ್ಣ ವಿಶ್ವಕರ್ಮ ಸಾಲೋಟಗಿ ಉಪಸ್ಥಿತರಿದ್ದರು.
ಸಿಂಚನಾ ಮಾಮಣಿ ಮತ್ತು ಸಾದ್ವಿ ಪ್ರಾರ್ಥನೆ ಸಲ್ಲಿಸಿದರು. ಶರಣಬಸಪ್ಪ ವಠಾರ ತಂಡ ನಾಡಗೀತೆ ಹಾಡಿದರು. ಮಹೇಶ ಪತ್ತಾರ ದೋರನಹಳ್ಳಿ ನಿರೂಪಿಸಿ ವಂದಿಸಿದರು.







