ಯಾದಗಿರಿ | ಜ.6ರಂದು ಫ್ರೀಡಂ ಪಾರ್ಕ್‌ನಲ್ಲಿ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನ : ಮರೆಪ್ಪ ಬುಕ್ಕಲ್

ಯಾದಗಿರಿ: ಬೋಧಗಯಾ ಮಹಾಬೋಧಿ ಮಹಾವಿಹಾರವನ್ನು ಬೌದ್ಧರ ಆಡಳಿತಕ್ಕೆ ಒಪ್ಪಿಸಬೇಕು ಹಾಗೂ ಬೋಧಗಯಾ ಟೆಂಪಲ್ ಆಕ್ಟ್–1949ನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ, ಮಿಷನ್ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನದ ವತಿಯಿಂದ ಜ.6ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಂಘಟನೆಯ ಮುಖಂಡ ಮರೆಪ್ಪ ಬುಕ್ಕಲ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗತ್ತಿಗೆ ಶಾಂತಿ, ಕರುಣೆ ಮತ್ತು ಪ್ರೀತಿಯ ಸಂದೇಶ ನೀಡಿದ ಭಗವಾನ್ ಬುದ್ಧರ ಪಾವನ ಕ್ಷೇತ್ರವಾದ ಬೋಧಗಯಾದ ಮಹಾಬೋಧಿ ಮಹಾವಿಹಾರವನ್ನು, ಬೋಧಗಯಾ ಟೆಂಪಲ್ ಆಕ್ಟ್–1949 ಎಂಬ ಅಸಂವಿಧಾನಿಕ ಕಾಯ್ದೆಯ ಮೂಲಕ ಬೌದ್ಧರ ಆಡಳಿತದಿಂದ ವಂಚಿಸಿ ಇತರರ ನಿಯಂತ್ರಣಕ್ಕೆ ನೀಡಲಾಗಿದೆ. ಇದು ಬೌದ್ಧ ಸಮುದಾಯದ ಮೇಲೆ ಮಾಡಿದ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಸ್ವಾತಂತ್ರ್ಯ ಪೂರ್ವದಿಂದಲೂ ಈ ಕುರಿತು ಹೋರಾಟ ನಡೆಯುತ್ತಿದ್ದರೂ ಇದುವರೆಗೆ ನ್ಯಾಯ ಸಿಕ್ಕಿಲ್ಲ. ಸಂವಿಧಾನದ ಕಾಲಂ 13, 25, 26 ಮತ್ತು 29ರ ಅಡಿಯಲ್ಲಿ ದೊರಕಿರುವ ಧಾರ್ಮಿಕ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಬೋಧಗಯಾ ಟೆಂಪಲ್ ಆಕ್ಟ್–1949ನ್ನು ರದ್ದುಗೊಳಿಸಿ, ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ಹಸ್ತಾಂತರಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸಿನ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ, ದೇಶದ ಬಿಕ್ಕು ಮಹಾಸಂಘವು ಫೆ.12ರ, 2026ರಂದು “ದೆಹಲಿ ಚಲೋ- ಮಿಷನ್ ಮಹಾಬೋಧಿ ಮಹಾವಿಹಾರ ಮುಕ್ತಿಗಾಗಿ” ಎಂಬ ಘೋಷಣೆಯೊಂದಿಗೆ ರಾಷ್ಟ್ರಮಟ್ಟದ ಹೋರಾಟಕ್ಕೆ ಕರೆ ನೀಡಿದೆ ಎಂದರು.
ಮನವಿಯಲ್ಲಿ ಬೋಧಗಯಾ ಟೆಂಪಲ್ ಆಕ್ಟ್–1949 ರದ್ದುಪಡಿಸುವುದು, ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಬೌದ್ಧರಿಗೆ ಒಪ್ಪಿಸುವುದು, ಬೋಧಗಯಾ ಆವರಣದ ಅತಿಕ್ರಮಿತ ಜಾಗ ವಾಪಸು ನೀಡುವುದು, ಸನ್ನತಿ ಅಭಿವೃದ್ಧಿ ಪ್ರಾಧಿಕಾರವನ್ನು ಪೂರ್ಣ ಪ್ರಮಾಣದಲ್ಲಿ ರಚಿಸುವುದು, ಕರ್ನಾಟಕ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ, ಬುದ್ಧ ಜಯಂತಿಗೆ ಸಾರ್ವತ್ರಿಕ ರಜೆ ಘೋಷಣೆ, ಬುದ್ಧ ವಿಹಾರಗಳಿಗೆ ಭೂಮಿ ಹಾಗೂ ಮೂಲಸೌಕರ್ಯ ಒದಗಿಸುವುದು ಹಾಗೂ ಅಶೋಕ ಶಿಲಾಶಾಸನಗಳ ಸಂರಕ್ಷಣೆಗೆ ವಿಶೇಷ ಯೋಜನೆ ರೂಪಿಸುವಂತೆ ಆಗ್ರಹಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ವೆಂಕಟೇಶ ಹೊಸಮನಿ, ನಾಗಣ್ಣ ಕಲ್ಲದೇವನಹಳ್ಳಿ, ಶರಣು ನಾಟೇಕಾರ್, ರಾಹುಲ್ ಹುಲಿಮನಿ, ಡಾ. ಭಗವಂತ ಅನ್ವಾರ, ಕಾಶಿನಾಥ ನಾಟೇಕಾರ್, ಚಂದ್ರಕಾಂತ ಚಲುವಾದಿ, ಮಾಳಪ್ಪ ಕೀರದಳ್ಳಿ ಸೇರಿದಂತೆ ಅನೇಕ ದಲಿತ ಹಾಗೂ ಬೌದ್ಧ ಮುಖಂಡರು ಉಪಸ್ಥಿತರಿದ್ದರು.







