ಯಾದಗಿರಿ | ಲವ್ ಮ್ಯಾರೇಜ್ ವಿಷಯಕ್ಕೆ ನ್ಯಾಯ ಪಂಚಾಯತ್ ; ನಾಲ್ವರಿಗೆ ಚಾಕು ಇರಿತ : ಆರೋಪಿಯ ಬಂಧನ

ಸಾಂದರ್ಭಿಕ ಚಿತ್ರ | PC : freepik
ಯಾದಗಿರಿ: ಲವ್ ಮ್ಯಾರೇಜ್ ವಿಚಾರಕ್ಕೆ ಸಂಬಂಧಿಸಿದ ನ್ಯಾಯಪಂಚಾಯತ್ ವೇಳೆ ಗಲಾಟೆ ನಡೆದು ನಾಲ್ವರು ಗಾಯಗೊಂಡ ಘಟನೆ ಯಾದಗಿರಿ ನಗರದ ಜಿಲ್ಲಾ ನ್ಯಾಯಾಲಯದ ಬಳಿ ನಡೆದಿದೆ.
ನಾಗಾಲಾಪುರ ಗ್ರಾಮದ ಮಲ್ಲಪ್ಪ ಅಲಿಯಾಸ್ ನಿರ್ಮಲ್ ಎಂಬಾತ, ಹೊನಗೇರ ಗ್ರಾಮದ ಪೀರಪ್ಪ, ಮಲ್ಲಪ್ಪ, ಮಲ್ಲೇಶ್ ಹಾಗೂ ಮತ್ತೊಬ್ಬ ಮಲ್ಲಪ್ಪ ಎಂಬವರ ಮೇಲೆ ಚಾಕು ಇರಿದಿದ್ದಾನೆ ಎಂದು ತಿಳಿದು ಬಂದಿದೆ.
ಹೊನಗೇರ ಗ್ರಾಮದ ಮಲ್ಲಾರೆಡ್ಡಿ ಹಾಗೂ ಶೋಭಾ ಎಂಬವರು ಬೆಂಗಳೂರಿನಲ್ಲಿ ಕೆಲಸ ಮಾಡುವ ವೇಳೆ ಪ್ರೀತಿಸಿ, ಕುಟುಂಬದವರ ಅನುಮತಿಯಿಲ್ಲದೆ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಬಳಿಕ ಕುಟುಂಬಸ್ಥರ ಒತ್ತಾಯದ ಮೇರೆಗೆ ಹಿರಿಯರ ಸಮ್ಮುಖದಲ್ಲಿ ಮರುಮದುವೆ ಮಾಡಲು ನ್ಯಾಯಪಂಚಾಯತ್ ಏರ್ಪಡಿಸಲಾಗಿತ್ತು. ಇದೇ ವೇಳೆ ಮಾತಿನ ಚಕಮಕಿ ಉಂಟಾಗಿ ನಿರ್ಮಲ್ ಚಾಕು ಹಿಡಿದು ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಯಾದಗಿರಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.





