ಯಾದಗಿರಿ | ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ವಿರೋಧ : ನಾಲ್ವಡಗಿಯಲ್ಲಿ AIDSO ನೇತೃತ್ವದಲ್ಲಿ ಪ್ರತಿಭಟನೆ

ಯಾದಗಿರಿ : ಸರ್ಕಾರಿ ಶಾಲೆಗಳನ್ನು ಮುಚ್ಚುವ ಉದ್ದೇಶದ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ವಿರೋಧಿಸಿ ಶುಕ್ರವಾರ ನಾಲ್ವಡಗಿಯ ಶಹಾಪುರ ಗೇಟ್ ಬಳಿ ಪೋಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಮಾತನಾಡಿದ AIDSO ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ. ಅವರು, ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ರಾಜ್ಯ ಸರ್ಕಾರ ಸುಮಾರು 40,000 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಅತ್ಯಂತ ಬಡ ಜನ ವಿರೋಧಿ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಯೋಜನೆಯ ವಿರುದ್ಧ ರಾಜ್ಯಾದ್ಯಂತ ಪೋಷಕರು, ಗ್ರಾಮಸ್ಥರು ಹಾಗೂ ಶಿಕ್ಷಣ ಪ್ರೇಮಿಗಳು ಧ್ವನಿ ಎತ್ತುತ್ತಿದ್ದಾರೆ. ಕರ್ನಾಟಕದ ಹಿರಿಯ ಸಾಹಿತಿಗಳು ಸಹ ಶಾಲೆಗಳ ಉಳಿವಿಗಾಗಿ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು “ಒಂದೇ ಒಂದು ಮಗು ಇದ್ದರೂ ಶಾಲೆ ಮುಚ್ಚುವುದಿಲ್ಲ” ಎಂದು ಹೇಳಿಕೆ ನೀಡುತ್ತಿದ್ದರೂ, ವಾಸ್ತವದಲ್ಲಿ ಶಾಲೆ ವಿಲೀನಕ್ಕೆ ಸರ್ಕಾರವೇ ದಾರಿ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.
ಸ್ವಯಂ ಪ್ರೇರಿತ ವಿಲೀನ ಎನ್ನುವ ಹೆಸರಿನಲ್ಲಿ ಸರ್ಕಾರ ನಯವಾದ ವಂಚನೆ ನಡೆಸುತ್ತಿದೆ. ಕೆಪಿಎಸ್ ಯೋಜನೆ ರೂಪಿಸುವ ಮುನ್ನ ಎಸ್‌ಡಿಎಂಸಿ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿ ಸಂಘಟನೆಗಳ ಜೊತೆ ಯಾವುದೇ ಸಮಾಲೋಚನೆ ನಡೆಸಿಲ್ಲ ಎಂದು ಅವರು ದೂರಿದರು.
ಎಡಿಬಿ ಬ್ಯಾಂಕ್ ಸಾಲ ಯೋಜನೆ, ಕೆಕೆಆರ್‌ಡಿಬಿ, ಮೈನಿಂಗ್ ಹಾಗೂ ಸಿಎಸ್‌ಆರ್ ಹಣ ಬಳಸಿ ಕೆಪಿಎಸ್ ಯೋಜನೆ ಜಾರಿಗೊಳಿಸಲಾಗುತ್ತಿದೆ. ಆದರೆ ಸರ್ಕಾರಿ ಶಾಲೆಗಳನ್ನು ಬಲಪಡಿಸಲು ನೇರ ಸರ್ಕಾರಿ ಅನುದಾನ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಇದು ಶಿಕ್ಷಣದ ಸಂಪೂರ್ಣ ಖಾಸಗೀಕರಣಕ್ಕೆ ನಡೆಸುತ್ತಿರುವ ಷಡ್ಯಂತ್ರ ಎಂದು ಹೇಳಿದರು.
ಸರ್ಕಾರಕ್ಕೆ ನಿಜವಾಗಿಯೂ ಶಿಕ್ಷಣದ ಬಗ್ಗೆ ಕಾಳಜಿ ಇದ್ದರೆ 61,000 ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಿ, ಶಾಲೆಗಳಿಗೆ ಸುಸಜ್ಜಿತ ಕಟ್ಟಡಗಳು ಹಾಗೂ ಶೌಚಾಲಯಗಳನ್ನು ಒದಗಿಸಲಿ. ಆದರೆ ಶಾಲೆಗಳನ್ನು ಮುಚ್ಚಲು ಬಂದರೆ ರಾಜ್ಯದ ಜನತೆ ಒಪ್ಪುವುದಿಲ್ಲ. ಅಗತ್ಯವಿದ್ದರೆ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಸಮಿತಿ ಸದಸ್ಯ ನಾಗರಾಜ್ ವಹಿಸಿದ್ದರು. ಪ್ರತಿಭಟನೆಯಲ್ಲಿ ಮಲ್ಲಪ್ಪ, ಅಯ್ಯಪ್ಪ, ಮಾಳಿಂಗರಾಯ, ತಿಮ್ಮಪ್ಪ, ಮರೆಪ್ಪ ಸೇರಿದಂತೆ ನಾಲ್ವಡಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ಪೋಷಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.







