ಯಾದಗಿರಿ | ಅವಳಿ ಗ್ರಾಮಗಳ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ : ಸಚಿವ ಶರಣಬಸಪ್ಪ ದರ್ಶನಾಪುರ

ಯಾದಗಿರಿ : ನಿಮ್ಮೆಲ್ಲರ ಸಹಕಾರದಿಂದ ಮಾತ್ರ ಅವಳಿ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಕೆಂಭಾವಿ ಸಮೀಪದ ಹೆಗ್ಗಣದೊಡ್ಡಿ ಮತ್ತು ಗೋಡ್ರಿಹಾಳ ಅವಳಿ ಗ್ರಾಮಗಳಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಧರ್ಮರ ಮಠದ ನೂತನ ಕಟ್ಟಡ, 20 ಲಕ್ಷ ರೂ. ವೆಚ್ಚದ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆ ಹಾಗೂ 5 ಕೋಟಿ ರೂ. ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರ ಅಡಿಗಲ್ಲು ಪೂಜೆ ನೆರವೇರಿಸಲಾಯಿತು.
ನಂತರ ಮಾತನಾಡಿದ ಅವರು, ಸರಕಾರ ಅಧಿಕಾರಕ್ಕೆ ಬಂದ ಎರಡು-ಮೂರು ತಿಂಗಳಲ್ಲೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಸರಕಾರ ಇರುವವರೆಗೆ ಗ್ಯಾರಂಟಿ ಯೋಜನೆ ನಿಲ್ಲದು ಎಂದರು.
ಗ್ರಾಮಾಭಿವೃದ್ಧಿಗೆ ಜನರ ಸಹಕಾರ ಅಗತ್ಯವಿದೆ ಎಂದು ತಿಳಿಸಿದ ಸಚಿವರು, ಗೊಡ್ರಿಹಾಳದಲ್ಲಿ 50 ಮನೆಗಳು, ಹೈಸ್ಕೂಲ್ ಕಟ್ಟಡ, ಹಾಸ್ಟೆಲ್, ಮಾಲಗತ್ತಿಯಿಂದ ಬೇರ್ಪಟ್ಟ ಗ್ರಾಮ ಪಂಚಾಯತಿ ಕಟ್ಟಡ ಸೇರಿದಂತೆ ಹಲವಾರು ಕೆಲಸಗಳನ್ನು ಮಾಡಿರುವ ಸಂತೋಷವಿದೆ ಎಂದರು.
ಚರಂಡಿ ಮತ್ತು ಸಿಸಿ ರಸ್ತೆಗೆ 90 ಲಕ್ಷ ರೂ. ಮಂಜೂರು ಮಾಡಲಾಗಿದ್ದು, ಭೂಮಿಗಾಗಿ ಸ್ಥಳೀಯರು 20 ಲಕ್ಷ ರೂ. ದೇಣಿಗೆ ನೀಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಂಭಾವಿಯಿಂದ ಸುರಪುರದವರೆಗೆ 12 ಕೋಟಿ ರೂ. ಅನುದಾನದಲ್ಲಿ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಕೂಡಲಗಿ–ಕರಡಕಲ್ಲ ಹಾಗೂ ಕೆಂಭಾವಿ–ಮಲ್ಲಾ ರಸ್ತೆ ಕಾಮಗಾರಿಗೂ ಚಾಲನೆ ದೊರಕಲಿದೆ ಎಂದರು.
ಧರ್ಮರ ಮಠದ ಮಾತೋಶ್ರೀ ನಿಜಲಿಂಗಮ್ಮ ತಾಯಿ ಅವರ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ ಒರಡಿಯಾ, ಡಿಹೆಚ್ಓ ಮಹೇಶ ಬಿರಾದಾರ್, ಟಿಹೆಚ್ಒ ಆರ್.ವಿ. ನಾಯಕ್, ಶಹಾಪೂರ ಬ್ಲಾಕ್ ಅಧ್ಯಕ್ಷ ಶಿವಮಾಂತ ಚಂದಾಪೂರ, ಶರಣಪ್ಪ ಸಲಾದಪೂರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ್, ಧರ್ಮರ ಮಠದ ಆರ್.ಎಸ್. ಪಾಟೀಲ್, ಮಹಿಪಾಲರಡ್ಡಿ ಡಿಗ್ಗಾವಿ, ಶಿವರಾಜ ಬೂದೂರ, ಬಸವರಾಜ ಚಿಂಚೋಳಿ, ಹಣಮಂತ್ರಾಯ ದೊರಿ, ತಾ.ಪಂ ಪ್ರಚಾರ ಸಮಿತಿ ಅಧ್ಯಕ್ಷ ಮಾನಪ್ಪ ಸೂಗೂರ್, ತಾ.ಪಂ ಇಒ ಬಸವರಾಜ ಸಜ್ಜನ, ಹಣಮಂತ್ರಾಯ ಮಾನಸುಣಗಿ, ಲಾಳೆಪಟೇಲ್ ಹೆಗ್ಗಣದೊಡ್ಡಿ, ಸಿದ್ದನಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಮಡಿವಾಳಪ್ಪ ಪಾಟೀಲ್ ನಿರೂಪಿಸಿದರು.







