ಯಾದಗಿರಿ | ಮುಂದಿನ ಚುನಾವಣೆಗಳಿಗೆ ಅತ್ಯುತ್ತಮ ಸ್ವೀಪ್ ಚಟುವಟಿಕೆಗಳ ಯೋಜನೆ ರೂಪಿಸಿ: ಪಿ.ಎಸ್.ವಸ್ತ್ರದ್

ಯಾದಗಿರಿ: ಮುಂಬರುವ ಚುನಾವಣೆಗೆ ಮುಂಚಿತವಾಗಿ ಸ್ವೀಪ್ ಚಟುವಟಿಕೆಗಳನ್ನು ಅತ್ಯುತ್ತಮವಾಗಿ ನಿರ್ವಹಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಪಿ.ಎಸ್.ವಸ್ತ್ರದ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಮತದಾರರ ಪಟ್ಟಿಯ ಸಂಕ್ಷೀಪ್ತ ಪರಿಷ್ಕರಣೆ -2026 ಸಂಬಂಧ ಸ್ವೀಪ್ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಮತದಾರರ ದಿನಾಚರಣೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ವ್ಯವಸ್ಥಿತ ಮತದಾರರ ಶಿಕ್ಷಣ ಹಾಗೂ ಚುನಾವಣಾ ಭಾಗವಹಿಸುವಿಕೆ ಚಟುವಟಿಕೆ ಅಂಗವಾಗಿ ಮೂರು ಹಂತಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಮತದಾರರಿಗೆ ಜಾಗೃತಿ ಕಾರ್ಯಕ್ರಮ ಅಚ್ಚುಕಟ್ಟಾಗಿ ಕೈಗೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವಂತಾಗಬೇಕು. ಚುನಾವಣಾ ಸಾಕ್ಷರತಾ ಹಾಗೂ ಜಾಗೃತಿ ಸಂಘಗಳನ್ನು ಸದೃಢಗೊಳಿಸಿ ಸೂಕ್ತ ಅರಿವು ಮೂಡಿಸುವಂತಾಗಬೇಕು ಎಂದು ಅವರು ಸಲಹೆ ನೀಡಿದರು.
ಈಗ ಯೋಜನೆ ರೂಪಿಸುವ ಕಾಲ ಮುಂದೆ ಅಭಿಯಾನಗಳನ್ನು ಕೈಗೊಳ್ಳುವಂತಾಗಬೇಕು. ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು.
ರಾಷ್ಟ್ರೀಯ ಮತದಾರರ ದಿನಾಚರಣೆ :
ಜ.25ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಯಶಸ್ವಿಯಾಗಿ ಹಮ್ಮಿಕೊಳ್ಳಬೇಕು. ಹದಿನೆಂಟು ವರ್ಷ ಆದ ಯುವ ಮತದಾರರು, ವಿಶೇಷಚೇತನ ಮತದಾರರು, ಹಿಂದುಳಿದ ಜನಾಂಗಗಳ ಹಾಗೂ ಇತರೆ ಅರ್ಹರಿಗೆ ಎಪಿಕ್ ಕಾರ್ಡ್ ವಿತರಣೆ, ಪ್ರತಿಜ್ಞಾ ವಿಧಿ ಬೋಧನೆ, ಅತ್ಯುತ್ತಮ ಚುನಾವಣಾ ಕೆಲಸಗಾರರಿಗೆ ಸನ್ಮಾನ, ನಿಬಂಧ ಸ್ಪರ್ಧೆ, ಮತದಾನಕ್ಕಾಗಿ ಇರುವ ಮಾನದಂಡಗಳು, ಮಾರ್ಗಸೂಚಿಗಳ ಬಗ್ಗೆ ತಿಳಿಹೇಳಬೇಕು ಎಂದು ಸಲಹೆ ನೀಡಿದರು.
ವಿಧಾನಸಭಾ ಕ್ಷೇತ್ರವಾರು ಪೋಲಿಂಗ್ ಸ್ಟೇಶನ್ ವೈಸ್ ಮತದಾರರ ಮ್ಯಾಪಿಂಗ್‌ನಲ್ಲಿ ಶೇ.50ರಷ್ಟು ಮೇಲ್ಪಟ್ಟು ಪ್ರಗತಿ ಸಾಧಿಸಬೇಕು ಎಂದು ಅವರು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ್, ಸಹಾಯಕ ಆಯುಕ್ತ ಶ್ರೀಧರ್ ಗೋಟುರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







