ಯಾದಗಿರಿ | ಲುಂಬಿನಿ ಉದ್ಯಾನವನದಲ್ಲಿ 101 ಅಡಿ ಎತ್ತರದ ಬುದ್ಧ ಮೂರ್ತಿ ಸ್ಥಾಪನೆಗೆ ಮನವಿ

ಯಾದಗಿರಿ: ನಗರದ ಲುಂಬಿನಿ ಉದ್ಯಾನವನದಲ್ಲಿ 101 ಅಡಿ ಎತ್ತರದ ಭಗವಾನ್ ಬುದ್ಧರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಸ್ವಾಭಿಮಾನಿ ಒಕ್ಕೂಟದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ದಲಿತ ಸಂಘಟನೆಗಳ ಸ್ವಾಭಿಮಾನಿ ಒಕ್ಕೂಟದ ಅಧ್ಯಕ್ಷ ಕಾಶಿನಾಥ ನಾಟೇಕಾರ್ ಅವರು, ನಗರ ಹಾಗೂ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿ ಬೆಳೆದಿರುವ ಲುಂಬಿನಿ ಉದ್ಯಾನವನವು ಶಾಂತಿಯುತ ಹಾಗೂ ಹಸಿರು ಪರಿಸರ ಹೊಂದಿದ ವಿಹಾರ ಕೇಂದ್ರವಾಗಿದೆ. ಜಿಲ್ಲಾಡಳಿತ ಮತ್ತು ನಗರಸಭೆ ಈಗಾಗಲೇ ಈ ಸ್ಥಳವನ್ನು “ಲುಂಬಿನಿ ಉದ್ಯಾನವನ” ಎಂದು ಅಧಿಕೃತವಾಗಿ ಘೋಷಿಸಿರುವುದರಿಂದ, ಇಲ್ಲಿ ಭಗವಾನ್ ಬುದ್ಧರ ಭವ್ಯ ಮೂರ್ತಿ ಸ್ಥಾಪನೆ ಮಾಡಿದರೆ ಸ್ಥಳದ ಧಾರ್ಮಿಕ ಹಾಗೂ ಪ್ರವಾಸಿ ಮಹತ್ವ ಹೆಚ್ಚಲಿದೆ ಎಂದು ತಿಳಿಸಿದರು.
ಉದ್ಯಾನವನದ ಮಧ್ಯಭಾಗದಲ್ಲಿ (ನಡುಗಡ್ಡೆ ಪ್ರದೇಶ) 101 ಅಡಿ ಎತ್ತರದ ಬುದ್ಧ ಮೂರ್ತಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಉದ್ಯಾನವನದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಅವುಗಳನ್ನು ತಕ್ಷಣ ಸರಿಪಡಿಸುವಂತೆ ಒತ್ತಾಯಿಸಲಾಗಿದೆ. ಸಾರ್ವಜನಿಕರ ಭದ್ರತೆಗಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು, ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ ಸಮಗ್ರ ಸುಂದರೀಕರಣ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಸ್ವಾಭಿಮಾನಿ ಒಕ್ಕೂಟದ ಗೌರವಾಧ್ಯಕ್ಷ ಚಂದಪ್ಪ ಮುನಿಯಪ್ಪನೋರ್, ಶರಣು ಎಸ್. ನಾಟೇಕಾರ, ರಾಹುಲ್ ಕೊಲ್ಲೂರಕರ್, ಚಂದ್ರಕಾಂತ ಚಲುವಾದಿ, ತಾಯಪ್ಪ ಭಂಡಾರಿ, ಸೇರಿದಂತೆ ಅನೇಕರು ಇದ್ದರು.







