ಯಾದಗಿರಿ | ವಿಚಾರಣೆ ನೆಪದಲ್ಲಿ ಪೊಲೀಸರಿಂದ ಬ್ಲಡ್ ಕ್ಯಾನ್ಸರ್ ರೋಗಿಗೆ ಹಲ್ಲೆ; ಕುಟುಂಬಸ್ಥರಿಂದ ಗಂಭೀರ ಆರೋಪ

ಯಾದಗಿರಿ: ವಿಚಾರಣೆಯ ನೆಪದಲ್ಲಿ ರಕ್ತ ಕ್ಯಾನ್ಸರ್ ಪೀಡಿತ ರೋಗಿಯೊಬ್ಬರ ಮೇಲೆ ಪೊಲೀಸರು ಅಮಾನವೀಯವಾಗಿ ಹಲ್ಲೆ ನಡೆಸಿರುವ ಗಂಭೀರ ಆರೋಪ ತಡವಾಗಿ ಬೆಳಕಿಗೆ ಬಂದಿದೆ.
ಶಹಾಪುರ ತಾಲೂಕಿನ ಕೆಂಭಾವಿ ನಿವಾಸಿ ಮೆಹಬೂಬ್ ಅಲಿ ಅವರನ್ನು ಮಂಗಳವಾರ ಕೆಂಭಾವಿ ಪೊಲೀಸರು ವಿಚಾರಣೆಗೆಂದು ಕರೆದೊಯ್ದಿದ್ದರು. ಅಲ್ಲಿಂದ ಅವರನ್ನು ಖಾಸಗಿ ವಾಹನದಲ್ಲಿ ಹುಣಸಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಸಿಪಿಐ, ಪಿಎಸ್‌ಐ ಹಾಗೂ ಸಿಬ್ಬಂದಿ ವರ್ಗದವರು ಮೆಹಬೂಬ್ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಗಂಭೀರ ಗಾಯಗೊಂಡ ಮೆಹಬೂಬ್ ಅಲಿ ಅವರನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಾಲ್ಕು ದಿನಗಳ ಚಿಕಿತ್ಸೆ ಪಡೆದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ನಡೆದ ಅಪಘಾತವೊಂದಕ್ಕೆ ಸಂಬಂಧಿಸಿದಂತೆ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಮೆಹಬೂಬ್ ಅಲಿ ಮತ್ತು ಉತ್ತರ ಪ್ರದೇಶ ಮೂಲದ ಸಾಹಿಲ್ ಎಂಬ ಯುವಕ ಜಾತ್ರೆಗಳಲ್ಲಿ ಆಟಿಕೆ ಮಾರಾಟ ಮಾಡುತ್ತಿದ್ದರು. ಆಗಸ್ಟ್‌ನಲ್ಲಿ ಟಂಟಂ ವಾಹನದಿಂದ ಬಿದ್ದು ಸಾಹಿಲ್ ಸಾವನ್ನಪ್ಪಿದ್ದರು. ಐದು ತಿಂಗಳ ಹಳೆಯ ಈ ಅಪಘಾತ ಪ್ರಕರಣದ ಮೇಲೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು, ಮೆಹಬೂಬ್ ಅಲಿ ಅವರನ್ನು ವಿಚಾರಣೆಗೆ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಖಾಲಿ ಪೇಪರ್ ನಲ್ಲಿ ಸಹಿಗೆ ಒತ್ತಡ :
ಬ್ಲಡ್ ಕ್ಯಾನ್ಸರ್ ರೋಗಿ ಮೆಹಬೂಬ್ ಅಲಿ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹಲ್ಲೆ ನಡೆಸಿ, ಬಳಿಕ ಖಾಲಿ ಪೇಪರ್ ಮೇಲೆ ಸಹಿ ಹಾಕುವಂತೆ ಒತ್ತಡ ಹಾಕಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಯಾವುದೇ ನೋಟಿಸ್ ಕೊಡದೆ ಪೊಲೀಸರು ಏಕಾಏಕಿ ಮನೆಗೆ ನುಗ್ಗಿ ಪತಿಯನ್ನು ಎಳೆದುಕೊಂಡು ಹೋಗಿ ಥಳಿಸಿದ್ದಾರೆ, ಅಮಾನವೀಯವಾಗಿ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿ ಯಾರೇ ಇದ್ದರೂ, ಅವರ ವಿರುದ್ಧ ಕ್ರಮ ಜರುಗಿಸಬೇಕು. ನಮಗೆ ನ್ಯಾಯ ಕೊಡಿಸಬೇಕು ಎಂದು ಸಂತ್ರಸ್ತನ ಪತ್ನಿ ಚಾಂದ್ ಸುಲ್ತಾನ ಬೇಗಂ ತಿಳಿಸಿದ್ದಾರೆ.
ಈ ಕುರಿತು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ಪ್ರತಿಕ್ರಿಯಿಸಿದ್ದು, ಕೆಂಭಾವಿ ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ನೀಡಲಾಗಿದೆ, ಸುರಪುರ ಡಿಎಸ್ಪಿ ಜಾವೀದ್ ಇನಾಂದಾರ್ ಅವರ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ಅವರಿಂದ ವರದಿ ಬಂದ ಬಳಿಕ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.







