ಯಾದಗಿರಿ | ಅತಿವೃಷ್ಟಿಯಿಂದಾದ ಹಾನಿಯ ಕುರಿತು ಪರಿಶೀಲನಾ ಸಭೆ

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಏಪ್ರಿಲ್ ಮಾಹೆಯಿಂದ ಈವರೆಗೆ ಒಟ್ಟು ಮೂರು ಪ್ರಾಣ ಹಾನಿ ಹಾಗೂ 77 ಜಾನುವಾರು ಪ್ರಾಣ ಹಾನಿ ಪ್ರಕರಣಗಳಲ್ಲಿ ಜಿಲ್ಲಾಡಳಿತದ ವತಿಯಿಂದ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾದ ಹಾನಿಯ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರಿಶೀಲನಾ ಸಭೆ ನಡೆಸಿದ ಅವರು, ಸಿಡಿಲಿನಿಂದ ಮೃತಪಟ್ಟ ಇಬ್ಬರು ಹಾಗೂ ಮರಬಿದ್ದು ಸಾವನ್ನಪ್ಪಿದ ಓರ್ವ ವಾರಸುದಾರರಿಗೆ ಹಾಗೂ ಮೃತಪಟ್ಟ 77 ಜಾನುವಾರು ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದೆ ಎಂದು ಹೇಳಿದರು.
ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಹೆಸರು ಬೆಳೆ, ಹತ್ತಿ, ತೊಗರಿ ಬೆಳೆ(ಭತ್ತ ಹೊರತುಪಡಿಸಿ) ಅಂದಾಜು 25 ಸಾವಿರ.ಹೆ. ನಾಶವಾಗಿದೆ. ಅದರಂತೆ ಸುಮಾರು 187 ಮನೆಗಳು ಭಾಗಶಃ ಬಿದ್ದ ಬಗ್ಗೆ ಮಾಹಿತಿ ಇದ್ದು, ಸಂಪೂರ್ಣ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಹಾಗೂ ರಸ್ತೆಗಳ ದುರಸ್ತಿಗೆ ಲಭ್ಯ ಇರುವ ಅನುದಾನ ಬಳಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅಕ್ಷರ ಅವಿಷ್ಕಾರ ಯೋಜನೆಯಡಿ ಲಭ್ಯವಿರುವ 60 ಕೋ.ರೂ ಗಳು ಸಮರ್ಪಕ ಬಳಕೆಯಾಗಬೇಕು. ಶಾಲೆ,ವಸತಿ ನಿಲಯ, ಅಂಗನವಾಡಿ ಕಟ್ಟಡಗಳ ದುರಸ್ತಿ, ಕುಡಿಯುವ ನೀರು, ಶೌಚಾಲಯಗಳ ದುರಸ್ತಿಗೆ ಪ್ರಥಮ ಆದ್ಯತೆ ನೀಡುವಂತೆ ಅವರು ಸೂಚಿಸಿ, ಆಯಾ ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಚರಂಡಿಗಳ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುವಂತೆ ನೋಡಿಕೊಳ್ಳಲು ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಸಧ್ಯಕ್ಕೆ ಪ್ರವಾಹ ಪರಿಸ್ಥಿತಿ ಇಲ್ಲದಿದ್ದರೂ ಕೃಷ್ಣ ಹಾಗೂ ಭೀಮಾ ನದಿ ವ್ಯಾಪ್ತಿಯಲ್ಲಿ ಕಟ್ಟೆಚ್ಚರವಹಿಸಲು ಮತ್ತು ನಾರಾಯಣಪುರ ಮತ್ತು ಸನ್ನತಿ ಬ್ಯಾರೇಜ್ ಗಳ ನೀರು ಸಮರ್ಪಕ ನಿರ್ವಹಣೆಗೆ ಸೂಚಿಸಿ, ಮಹಾರಾಷ್ಟ್ರದ ಮಳೆ ಆಧಾರದ ಮೇಲೆ ಸೂಕ್ತ ನಿಗಾ ಇಡುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನದಿ ತೀರಗಳಲ್ಲಿ ಜನ, ಜಾನುವಾರು ಹೋಗದಂತೆ ಎಚ್ಚರಿಕೆ ನೀಡಿ, ನೋಡಲ್ ಅಧಿಕಾರಿಗಳು ತೀವ್ರ ನಿಗಾ ಇಡಬೇಕು. ಸಂಬಂಧಿಸಿದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸಲು ಅವರು ಸೂಚಿಸಿದರು.
ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ಶಾಸಕ ಶರಣಗೌಡ ಕಂದಕೂರ ಅವರು ಅತಿವೃಷ್ಟಿಯಿಂದ ಉಂಟಾದ ಕೃಷಿ ಬೆಳೆ ಹಾನಿ, ವಿದ್ಯುತ್ ಟ್ರಾನ್ಸ್ ಫಾರ್ಮರ್ಗಳ ಹಾನಿ, ರಸ್ತೆ ಹಾನಿ ಕುರಿತು ಸಚಿವರ ಗಮನಕ್ಕೆ ತಂದರು. ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅತಿವೃಷ್ಟಿಯಿಂದ ಉಂಟಾದ ಹಾನಿ ಹಾಗೂ ಪರಿಹಾರ ಕುರಿತು ವಿವರ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಸಿಇಓ ಲವೀಶ್ ಒರಡಿಯಾ, ಎಸ್ಪಿ ಪೃಥ್ವಿಕ್ ಶಂಕರ್, ಅಪರ್ ಜಿಲ್ಲಾಧಿಕಾರಿ ರಮೇಶ ಕೋಲಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







