ಯಾದಗಿರಿ | ಪ್ರಜಾಪ್ರಭುತ್ವ ಸಂರಕ್ಷಣೆಯಲ್ಲಿ ಪತ್ರಿಕೋದ್ಯಮದ ಪಾತ್ರ ಮಹತ್ತರ : ಬಿ.ವೆಂಕಟಸಿಂಗ್

ಯಾದಗಿರಿ, ಡಿ.25: ಪ್ರಜಾಪ್ರಭುತ್ವದಲ್ಲಿ ಪತ್ರಿಕೋದ್ಯಮಕ್ಕೆ ಬಹಳಷ್ಟು ಮಹತ್ವವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜನರ ಮೂಲಭೂತ ಹಕ್ಕುಗಳ ದುರುಪಯೋಗ ಆಗುತ್ತಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತಿದ್ದು, ವಿಶ್ವಾಸ ಕಳೆದುಕೊಳ್ಳುವ ಆತಂಕದಲ್ಲಿದ್ದೇವೆ ಎಂದು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ.ವೆಂಕಟಸಿಂಗ್ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-2028ನೆ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರ ಪತ್ರಕರ್ತರಿಗೆ ಸೌಲಭ್ಯಗಳನ್ನು ನೀಡಿದೆ. ಆದರೆ, ಷರತ್ತುಗಳು ಕಠಿಣವಾಗಿರುವುದರಿಂದ ಸೌಲಭ್ಯ ದೊರೆಯದಂತಾಗಿದೆ. ಪತ್ರಕರ್ತರ ಜೀವನ ಅಭದ್ರತೆಯಲ್ಲಿದೆ. ಕೆಲ ವರ್ಷಗಳ ಹಿಂದೆ ಪತ್ರಿಕಾ ಧರ್ಮ ಹೋಗಿ ಉದ್ಯೋಗ ಆಗಿತ್ತು. ಅದೀಗ ಉದ್ಯಮವಾಗಿದೆ. ಎಲ್ಲರಿಗೂ ಸರಕಾರಿ ಸೌಲಭ್ಯಗಳು ದೊರೆಯಲು ಪತ್ರಿಕಾ ಧರ್ಮ ಉಳಿಯಬೇಕಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ಸಂಘದ ಬೈಲಾಕ್ಕೆ ತಿದ್ದುಪಡಿ ಮಾಡಿಕೊಂಡು ಸಂಘದ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಿದರೆ ಬಹಳ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು. ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಭೀಮಣ್ಣ, ಸಾನಿಧ್ಯ ವಹಿಸಿದ್ದ ಶ್ರೀ ಚರಬಸವೇಶ್ವರ ಸಂಸ್ಥಾನದ ಶರಣಬಸವ ಗದ್ದುಗೆ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕೆಯುಡಬ್ಲ್ಯೂಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿದರು.
ಜಿಲ್ಲಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ನರಸಪ್ಪ ನಾರಾಯಣೋರ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ, ಜೆಡಿಎಸ್ ನಗರ ಘಟಕ ಅಧ್ಯಕ್ಷ ಬಂದಪ್ಪ ಅರಳಿ, ಪತ್ರಕರ್ತರಾದ ಭವಾನಿಸಿಂಗ್ ಠಾಕೂರ, ದೇವೇಂದ್ರಪ್ಪ ಕಪನೂರ ವೇದಿಕೆ ಇದ್ದರು. ಪತ್ರಕರ್ತರಾದ ಡಾ.ಎಸ್.ಎಸ್.ನಾಯಕ ಸ್ವಾಗತಿಸಿದರು. ಮಹೇಶ ಪತ್ತಾರ ನಿರೂಪಿಸಿ ವಂದಿಸಿದರು.







