ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಡಿ.28 ರಿಂದ 30ರವರೆಗೆ ರಾಜ್ಯ ಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ

ಯಾದಗಿರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಡಿ.28ರಿಂದ ಮೂರು ದಿನಗಳವರೆಗೆ ರಾಜ್ಯದ ಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಕಲ್ ನಟರಾಜ್ ತಿಳಿಸಿದ್ದಾರೆ.
ಗುರುವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನಾಮತಿ ಎಷ್ಟು ನಿಜ ? ವಾಮಾಚಾರ, ಪುನರ್ ಜನ್ಮ ಸತ್ಯನಾ?, ದೆವ್ವ, ದೇವರು ಮನುಷ್ಯರ ಮೈಮೇಲೆ ಬರುತ್ತದೆಯೇ?, ಪವಾಡಗಳು ನಡೆಯುತ್ತವೆಯೇ ? ಮನೆ ಮೇಲೆ ಕಲ್ಲು, ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಳ್ಳುವುದು ನಿಜನಾ ? ಹೀಗೆ ಜನರಲ್ಲಿ ಇರುವ ಮೌಢ್ಯ, ಕಂದಾಚಾರಗಳನ್ನು ಹೋಗಲಾಡಿಸಲು ಜಿಲ್ಲೆಯ ಯುವ ಜನಾಂಗ ಮತ್ತು ಸಮಸ್ತ ವಿದ್ಯಾರ್ಥಿ ಸಮೂಹಕ್ಕೆ ತಿಳಿಸುವ ಉದ್ದೇಶದಿಂದ ಈ ಸಮ್ಮೇಳನ ಗಿರಿಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಪಟ್ಟ ನೂರಾರು ಸಂಪನ್ಮೂಲ ವ್ಯಕ್ಯಿಗಳು, ವಿಜ್ಞಾನ ಸಂಚಾರಿ ಬಸ್ ಗಳು ಹಾಗೂ ಇದೇ ಕ್ಷೇತ್ರಕ್ಕೆ ಸಂಬಂಧಪಟ್ಟಂತಹ ಅನೇಕ ಕಂಪನಿಗಳು ಈ ಮೂರು ದಿನಗಳ ಸಮ್ಮೇಳನದಲ್ಲಿ ಭಾಹವಹಿಸಲಿವೆ. ನಮ್ಮ ನಡೆ ವಿಜ್ಞಾನ ಕಡೆ, ಮೌಢ್ಯ ಅಳೆದು ಮೌಲ್ಯ ಉಳಿಯಲಿ ಎಂಬ ನಿಟ್ಟಿನಲ್ಲಿ ಹುಟ್ಟಿಕೊಂಡ ಈ ಪರಿಷತ್ತು, ಹಿಂದೇ ನಾಲ್ಕು ಸಮ್ಮೇಳನಗಳನ್ನು ಯಶಸ್ಸಿಯಾಗಿ ಪೂರೈಸಿದೆ ಎಂದರು.
ಡಿ.28 ರಂದು ಮಧ್ಯಾಹ್ನ 3ಕ್ಕೆ ಮೆರವಣಿಗೆ ಮೈಲಾಪುರ ಅಗಸಿಯಿಂದ ಸಮ್ಮೇಳನದ ಸರ್ವಾಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಅವರ ಮೆರವಣಿಗೆ ಆರಂಭವಾಗುವುದರೊಂದಿಗೆ ಕಾರ್ಯಕ್ರಮಕ್ಕೆ ಆರಂಭದ ಚಾಲನೆ ಸಿಗಲಿದೆ ಎಂದರು.
ಡಿ.29ರಂದು ಬೆಳಗ್ಗೆ ಸಮ್ಮೇಳನದ ಉದ್ಘಾಟನೆಯಾಗಿ ನಂತರ ನಿಗದಿತ ಕಾರ್ಯಕ್ರಮಗಳು ತಡರಾತ್ರಿಯವರೆಗೆ ನಡೆಯಲಿವೆ. ಡಿ.30 ರಂದು ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಸಾಧಕರಿಗೆ ಜೀವಮಾನ ಪ್ರಶಸ್ತಿ, ವಿಜ್ಞಾನಗಿರಿ ಸ್ಮರಣ ಸಂಚಿಕೆ ಮತ್ತು ಇತರೆ ಎಂಟು ಪುಸ್ತಕಗಳ ಬಿಡುಗಡೆ ಹೀಗೆ ನಿರಂತರ ಕಾರ್ಯಕ್ರಮಗಳು ನಂತರ ಸಮಾರೋಪಗೊಳ್ಳಲಿದೆ. ಮೂರು ದಿನಗಳ ಸಮ್ಮೇಳನಕ್ಕೆ ಸಿಎಂ ಸಿದ್ದರಾಮಯ್ಯ ಆದಿಯಾಗಿ ಅನೇಕ ಸಚಿವ, ಶಾಸಕ, ಗಣ್ಯರನ್ನು ಆಹ್ವಾನಿಸಿದ್ದೆವೆ. ಇನ್ನೆರಡು ದಿನಗಳಲ್ಲಿ ಇದು ಅಂತಿಮಗೊಳ್ಳಲಿದೆ ಎಂದರು.
ಸಚಿವರಾದ ಶರಣಬಸಪ್ಪ ದರ್ಶನಾಪುರ, ಸತೀಶ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಹಿಂದಿನ ಸಮ್ಮೇಳನದ ಅಧ್ಯಕ್ಷೆ ಶಾಸಕಿ ಉಮಾಶ್ರೀ, ಜಿಲ್ಲೆಯ ಶಾಸಕರು, ಅಧಿಕಾರಿ ವೃಂದ ಸೇರಿದಂತೆಯೇ ಅನೇಕರು ಭಾಗವಹಿಸಲಿದ್ದಾರೆಂದು ನಟರಾಜ್ ಹುಲಕಲ್ ಮಾಹಿತಿ ನೀಡಿದರು. ಮೂರು ದಿನಗಳ ಸಂಪೂರ್ಣ ಊಟದ ವ್ಯವಸ್ಥೆ ಸಚಿವ ಸತೀಶ ಜಾರಕಿಹೊಳಿ ಮಾಡಿದ್ದಾರೆ. ಸರ್ಕಾರ ಇಪತ್ತು ಲಕ್ಷ ರೂ. ಕೊಡುವುದಾಗಿ ಭರವಸೆ ನೀಡಿದೆ. 1.55 ಕೋಟಿ ರೂ. ಒಟ್ಟು ಖರ್ಚು ಇದೆ. ದಾನಿಗಳಿಂದಲೇ ಸಂಗ್ರಹಿಸಿ ಮಾಡಲಾಗುತ್ತಿದೆ ಎಂದರು.
ದಸಂಸ ಸಂಘಟನೆ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಸಮ್ಮೇಳನದ ಕರಪತ್ರ ಬಿಡುಗಡೆ ಮಾಡಲಾಯಿತು. ವಿವಿಧ ಸಮುದಾಯಗಳ ಮುಖಂಡರಾದ ಡಾ.ಭೀಮಣ್ಣ ಮೇಟಿ, ಹಣುಮೇಗೌಡ ಮರಕಲ್, ಲಿಂಗಪ್ಪ ಹತ್ತಿಮನಿ, ರವಿ ಪಾಟೀಲ್ ರಾಯಚೂರು, ಸುದರ್ಶನ ನಾಯಕ, ಲಕ್ಷ್ಮಣ ರಾಠೋಡ್, ಡಾ.ಮಹ್ಮದ್ ಶಫಿ ಸೇರಿದಂತೆಯೇ ಇತರರಿದ್ದರು.







