ಯಾದಗಿರಿ | ಭ್ರೂಣ ಲಿಂಗ ಪತ್ತೆ ತಡೆಗೆ ಕಠಿಣ ಕಾನೂನು ಅನುಷ್ಠಾನ, ಮನೋಭಾವ ಬದಲಾವಣೆ ಅಗತ್ಯ: ಡಿಸಿ ಹರ್ಷಲ್ ಭೋಯರ್

ಯಾದಗಿರಿ: ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಸಮಾಜದ ಗಂಭೀರ ಸಮಸ್ಯೆಯಾಗಿದ್ದು, ಇದನ್ನು ತಡೆಯಲು ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನದ ಜೊತೆಗೆ ಜನರ ಮನಸ್ಥಿತಿಯಲ್ಲಿ ಬದಲಾವಣೆ ಅತ್ಯಂತ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಿಷನ್ ಶಕ್ತಿ ಯೋಜನೆಯಡಿ “ಬೇಟಿ ಬಚಾವೋ ಬೇಟಿ ಪಡಾವೋ” ಕಾರ್ಯಕ್ರಮದ ಅಂಗವಾಗಿ ನಗರದ ಆರೋಗ್ಯ ಇಲಾಖೆ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಕಾರ್ಯಾಗಾರವನ್ನು ಜಿಲ್ಲೆಯ ವಿವಿಧ ಸ್ಕ್ಯಾನಿಂಗ್ ಸೆಂಟರ್‌ಗಳ ವೈದ್ಯರು ಹಾಗೂ ಸ್ತ್ರೀರೋಗ ತಜ್ಞರಿಗೆ ಆಯೋಜಿಸಲಾಗಿತ್ತು.
ಗರ್ಭಪೂರ್ವ ಹಾಗೂ ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ತಂತ್ರ, ವಿಧಾನಗಳ ನಿಷೇಧ ಕಾಯ್ದೆ (PC & PNDT Act–1994) ಕುರಿತು ವೈದ್ಯರಿಗೆ ತರಬೇತಿ ನೀಡಲಾಗಿದ್ದು, ಲಿಂಗ ಪತ್ತೆ ಎಂಬ ಸಾಮಾಜಿಕ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕಾನೂನುಬದ್ಧ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾಗಿದೆ ಎಂದು ಹೇಳಿದರು. ಲಿಂಗಾನುಪಾತದ ಅಸಮತೋಲನಕ್ಕೆ ಭ್ರೂಣ ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆಯೇ ಪ್ರಮುಖ ಕಾರಣವಾಗಿದ್ದು, ಈ ಕಾರಣದಿಂದಲೇ 2003ರಲ್ಲಿ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಲಾಗಿದೆ ಎಂದು ತಿಳಿಸಿದರು.
ಹೆಣ್ಣು-ಗಂಡು ಭೇದಭಾವ ಕೇವಲ ಕಾನೂನಿನಿಂದ ಮಾತ್ರ ಹೋಗುವುದಿಲ್ಲ, ಜನರ ಮನೋಭಾವದಲ್ಲಿ ಬದಲಾವಣೆ ತರಬೇಕು. “ಹೆಣ್ಣು ಭಾರವಲ್ಲ – ಶಕ್ತಿಯ ಮೂಲ” ಎಂಬ ಸಂದೇಶ ಸಮಾಜದ ಪ್ರತಿಯೊಬ್ಬರಿಗೂ ತಲುಪಬೇಕಾಗಿದೆ ಎಂದು ತಿಳಿಸಿದರು. ಮಿಷನ್ ಶಕ್ತಿ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗಳು ಹೆಣ್ಣು ಮಕ್ಕಳ ಸುರಕ್ಷತೆ, ಭದ್ರತೆ ಮತ್ತು ಸಬಲೀಕರಣಕ್ಕೆ ಪ್ರಮುಖ ಪಾತ್ರವಹಿಸುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ಭ್ರೂಣ ಹತ್ಯೆ ಎಂಬ ಗಂಭೀರ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕಾನೂನು, ಆಡಳಿತ, ವೈದ್ಯಕೀಯ ವೃತ್ತಿ ಮತ್ತು ಸಮಾಜ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಶ್ ಬಿರಾದಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಶಿರಸಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ವೈದ್ಯರು, ಸ್ತ್ರೀರೋಗ ತಜ್ಞರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.







