ಯಾದಗಿರಿ | ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣ : ಆರೋಪಿಯ ಬಂಧನ

ಯಾದಗಿರಿ, ಆ.29: ಶಹಾಪುರ ವಸತಿ ನಿಲಯವೊಂದರ ಶೌಚಾಲಯದಲ್ಲಿಯೇ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತ ಆರೋಪಿಯನ್ನು ಕಕ್ಕೇರಾದ ಜಂವರದೊಡ್ಡಿಯ ನಿವಾಸಿ ಪರಮಣ್ಣ ವಾರಿ ಪೂಜಾರಿ ಎಂದು ತಿಳಿಸಿದ್ದಾರೆ. ಆರೋಪಿಗೆ ಈಗಾಗಲೇ ಮದುವೆಯಾಗಿ ಒಂದು ಮಗು ಇದೆ ಎಂದು ತನಿಖೆ ವೇಳೆ ತಿಳಿದುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಪ್ರಕರಣದ ಬಗ್ಗೆ ಮಾಹಿತಿ ತಿಳಿದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ನಾನು ತಕ್ಷಣವೇ ಶಹಾಪುರಕ್ಕೆ ತೆರಳಿ ಪರಿಶೀಲನೆ ನಡೆಸಿ ಐವರ ವಿರುದ್ಧ ದೂರು ದಾಖಲಿಸಿ, ನಾಲ್ವರನ್ನು ಸೇವೆಯಿಂದ ಅಮಾನತಿಗೆ ಶಿಫಾರಸು ಮಾಡಿದ್ದಲ್ಲದೇ, ಆಸ್ಪತ್ರೆಯಲ್ಲಿ ಇರುವ ಅಪ್ರಾಪ್ತ ತಾಯಿಯನ್ನು ಈ ಕುರಿತು ವಿಚಾರಣೆಗೆ ಒಳಪಡಿಸಿದಾಗ ಬಹಳ ಸಮಯದ ನಂತರ ಬಂಧಿತ ಆರೋಪಿ ಪರಮಣ್ಣನ ಹೆಸರು ಹೇಳಿದ್ದಾರೆ.
ತಕ್ಷಣವೇ ಆತನನ್ನು ಕರೆತಂದು ವಿಚಾರಣೆ ಮಾಡಿದಾಗ ನನಗೆ ಆ ಹುಡುಗಿ ಯಾರು ಎಂಬುದೇ ಗೊತ್ತಿಲ್ಲ ಎಂದು ನಾಟಕ ಮಾಡಿದ್ದಾನೆ. ಮತ್ತೆ ವಿಚಾರಿಸಿದಾಗ ಅನೈತಿಕ ಸಂಬಂಧ ಹೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿಯವರು ಮಾಹಿತಿ ನೀಡಿದ್ದಾರೆ.







