ಯಾದಗಿರಿ | ಕಾರ್ಮಿಕ ಇಲಾಖೆಯಿಂದ ಹಠಾತ್ ದಾಳಿ; 20ಕ್ಕೂ ಹೆಚ್ಚು ಮಕ್ಕಳ ರಕ್ಷಣೆ

ಯಾದಗಿರಿ: ಮಕ್ಕಳನ್ನು ಮತ್ತೊಮ್ಮೆ ಕೂಲಿಗೆ ಕಳುಹಿಸದೆ ಶಾಲೆಗೆ ಕಳುಹಿಸುವಂತೆ ಪಾಲಕ, ಪೋಷಕರು ಹಾಗೂ ಆಟೋ, ಟಂಟಂಗಳ ಚಾಲಕರಿಗೆ “ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ1986, ತಿದ್ದುಪಡಿ 2016”ರ ಕುರಿತು ಜಾಗೃತಿ ಮೂಡಿಸಲಾಯಿತು ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ರಿಯಾಜ್ ಪಟೇಲ್ ವರ್ಕನಳ್ಳಿ ಅವರು ಹೇಳಿದರು.
ಯಾದಗಿರಿ ಜಿಲ್ಲೆಯ ಹತ್ತಿಕುಣಿ ಗ್ರಾಮದ ರಸ್ತೆಯಲ್ಲಿ ನ.3 ರಂದು ಆಟೋ, ಟಂಟಂಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ ಮಾಹಿತಿಯ ಮೇರೆಗೆ ಹಠಾತ್ ದಾಳಿಯನ್ನು ಕೈಗೊಂಡು ಕೂಲಿ ಕೆಲಸಕ್ಕಾಗಿ ಆಟೋಗಳಲ್ಲಿ ತೆರಳಿದ್ದ ಸುಮಾರು 20ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ನಿರಂತರವಾಗಿ ಜನ ಜಾಗೃತಿ, ಕಾನೂನು ಅರಿವು, ನೆರವು ಕಾರ್ಯಕ್ರಮ, ಬೀದಿನಾಟಕ, ಆಟೋ-ಪ್ರಚಾರ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಇದರ ಹೊರತಾಗಿಯೂ ಆಟೋ, ಟಂಟಂಗಳ ಮೂಲಕ ಕೃಷಿ ಹಾಗೂ ಇನ್ನಿತರೆ ಕೆಲಸಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳ ಚಾಲಕರ ವಿರುದ್ಧ ಆರ್.ಟಿ.ಓ ಅಧಿಕಾರಿಗಳ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಯಾದಗಿರಿ ಕಾರ್ಮಿಕ ನಿರೀಕ್ಷಕರಾದ ಸಂಗೀತಾ ಹೊನ್ನೂರು ಅವರು ಮಾತನಾಡಿ, ಪಾಲಕರು ಮಕ್ಕಳನ್ನು ಕೂಲಿಗೆ ಕಳುಹಿಸದೇ ನಿರಂತರವಾಗಿ ಶಾಲೆಗೆ ಕಳುಹಿಸುವಂತೆ ಪಾಲಕ, ಪೋಷಕರಿಗೆ ತಿಳಿಸಿ, ಮಕ್ಕಳ ಸಹಾಯವಾಣಿ 1098ಗೆ ಸಂಪರ್ಕಿಸಿ ಎಂದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ನಿರೀಕ್ಷಕರಾದ ಅಯ್ಯಾಳಪ್ಪ, ಶಿಕ್ಷಣ ಸಂಯೋಜಕರಾದ ದೇವಿಂದ್ರಪ್ಪ ಇಟೆ, ಮಕ್ಕಳ ರಕ್ಷಣ ಘಟಕದ ಆಪ್ತ ಸಮಾಲೋಚಕರಾದ ದೇವಪ್ಪ ಗಿರಿಗಿರಿ, ಮಹೇಶ್ ಕುಮಾರ, ಕಾರ್ಮಿಕ ಇಲಾಖೆಯ ಲೆಕ್ಕಿಗರಾದ ಬಾಲು ನಾಯಕ, ವೆಂಕಟೇಶ್ ಶಿವಾಂಗೆ ಉಪಸ್ಥಿತರಿದ್ದರು.







