ಯಾದಗಿರಿ | ಡಿ.28 ರಿಂದ ಮೂರು ದಿನಗಳ ವೈಜ್ಞಾನಿಕ ಸಮ್ಮೇಳನ : ಕ್ರೀಡಾಂಗಣದಲ್ಲಿ ಭರದ ಸಿದ್ಧತೆ

ಯಾದಗಿರಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋದನಾ ಪರಿಣತ್ತಿನ ಆಶ್ರಯದಲ್ಲಿ ಡಿ.28 ರಿಂದ ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯ ಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಭರದ ಸಿದ್ಧತೆಗಳು ನಡೆದಿವೆ.
ಕ್ರೀಡಾಂಗಣದ ಹೃದಯ ಭಾಗದಲ್ಲಿ ಪ್ರಧಾನ ವೇದಿಕೆ ನಿರ್ಮಿಸಲಾಗುತ್ತಿದೆ. ಮುಂಭಾಗದಲ್ಲಿ ಆಸನಗಳ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 28ರಂದು ಮಧ್ಯಾಹ್ನ 2.30 ಕ್ಕೆ ನಗರದ ಮೈಲಾಪುರ ಬೇಸ್ ನಿಂದ ಬ್ಯಾಕವರ್ಡ್ ಹಾಸ್ಟೆಲ್ ವರೆಗೆ ಸರ್ವಾಧ್ಯಕ್ಷರ ಮೆರವಣಿಗೆ ನಡೆಯಲಿದೆ ಎಂದು ಪರಿಷತ್ತಿನ ಜಿಲ್ಲಾದ್ಯಕ್ಷ ಗುಂಡಪ್ಪ ಕಲಬುರಗಿ ವಿವರಿಸಿದರು.
ಸತತ ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನಕ್ಕೆ ಒಟ್ಟು 16ರಿಂದ 20 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಇದಕ್ಕಾಗಿ ಹಲವು ಭೋಜನ, ಪ್ರಚಾರ, ವೇದಿಕೆ, ಮೆರವಣಿಗೆ, ಜಲ, ವಸತಿ ಸಮಿತಿಗಳನ್ನು ರಚಿಸಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಬರುವ ಜನರಿಗೆ ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಒದಗಿಸಲಾಗುತ್ತಿದೆ. ಯಾದಗಿರಿ ಸೇರಿದಂತೆ ಪಕ್ಕದ ಕಲಬುರಗಿ, ರಾಯಚೂರು ಜಿಲ್ಲೆಗಳಿಂದ ಜನತೆ ಆಗಮಿಸಲಿದ್ದಾರೆ .ಜಿಲ್ಲೆಯಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಜನತೆ ಆಗಮಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ ನಟರಾಜ, ವಸತಿ ಸಮಿತಿಯ ಇಂದೂದರ ಸಿನ್ನೂರ ಇದ್ದರು.
ಭೋಜನಕ್ಕಾಗಿ 19 ಕೌಂಟರ್ ವ್ಯವಸ್ಥೆ :
ಸಮ್ಮೇಳನಕ್ಕೆ ಆಗಮಿಸುವ ಜನತೆಗೆ ಭೋಜನದ ವ್ಯವಸ್ಥೆ ಅಚ್ಚುಕಟ್ಟಾಗಿ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಒಟ್ಟು 19 ಕೌಂಟರ್ ಗಳನ್ನು ಸ್ಥಾಪಿಸಲಾಗಿದೆ.







