ಯಾದಗಿರಿ | ಮಾಜಿ ಸಚಿವ ರಾಜೂ ಗೌಡ ಅವರ ಕಾರಿಗೆ ಟ್ರಕ್ ಢಿಕ್ಕಿ : ಪ್ರಾಣಾಪಾಯದಿಂದ ಪಾರು

ಯಾದಗಿರಿ: ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಪಂದ್ಯ ಮುಗಿಸಿ ಮರಳುತ್ತಿದ್ದ ಮಾಜಿ ಸಚಿವ ರಾಜೂ ಗೌಡ ಅವರು ಪ್ರಯಾಣಿಸುತ್ತಿದ್ದ ಕಾರು ಶುಕ್ರವಾರ ತಡರಾತ್ರಿ ನಗರದ ಗಂಜ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ರಾಜೂ ಗೌಡ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಶಾಖಪಟ್ಟಣದಲ್ಲಿ ನಡೆದ ಸಿಸಿಎಲ್ ಪಂದ್ಯ ಮುಗಿಸಿಕೊಂಡು ಹೈದರಾಬಾದ್ ಮಾರ್ಗವಾಗಿ ತಮ್ಮ ಊರಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಗಂಜ್ ಹೈವೇ ರಸ್ತೆಯಲ್ಲಿ ವೇಗವಾಗಿ ಬಂದ ಟ್ರಕ್ ಒಂದು ರಾಜೂ ಗೌಡ ಅವರ ಕಾರಿಗೆ ಹಿಂದಿನಿಂದ ಬಲವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ರಾಜೂ ಗೌಡ ಅವರಿಗೆ ಸ್ವಲ್ಪ ಮಟ್ಟಿನ ತರಚಿದ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯವಾಗಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರು ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. "ನಾನು ಸುರಕ್ಷಿತವಾಗಿದ್ದೇನೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ" ಎಂದು ರಾಜೂ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ.





