ಯಾದಗಿರಿ | ಸರಕಾರಿ ಕಚೇರಿಗಳಿಗೆ ರಾಜ್ಯ ಲೋಕಾಯುಕ್ತರಿಂದ ಅನಿರೀಕ್ಷಿತ ಭೇಟಿ

ಯಾದಗಿರಿ : ಕೃಷಿ ಇಲಾಖೆ ವ್ಯಾಪ್ತಿಯ ಫಲಾನುಭವಿ ಆಧಾರಿತ ಯೋಜನೆಗಳಡಿ ರೈತರಿಗೆ ನ್ಯಾಯಯುತವಾಗಿ ಹಾಗೂ ಪಾರದರ್ಶಕವಾಗಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ರಾಜ್ಯ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೃಷಿ ಇಲಾಖೆ ಕಚೇರಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಅವರು, ರೈತರು ಸೌಲಭ್ಯಕ್ಕಾಗಿ ಬಂದಾಗ ವಿಳಂಬವಿಲ್ಲದೆ ಸ್ಪಂದಿಸಬೇಕು. ಸಕಾಲಕ್ಕೆ ನೆರವು ಸಿಗದಿದ್ದರೆ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ. ಆದ್ದರಿಂದ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದು ಅಧಿಕಾರಿಗಳ ಕರ್ತವ್ಯ ಎಂದು ಹೇಳಿದರು.
ಜಿಲ್ಲೆಯ ಕಾಡಮ್ ಗೇರಾ ಗ್ರಾಮದ ರೈತ ತಿಪ್ಪಣ್ಣ ಅವರು ಅಮರೇಶ್ವರ ಹಾಗೂ ರಾಘವೇಂದ್ರ ಎಂಟರ್ಪ್ರೈಸಸ್‌ನಲ್ಲಿ ಸುಮಾರು 14 ಎಕರೆ ಜಮೀನಿಗೆ ತಲಾ 700 ರೂ. ಗೆ ಖರೀದಿಸಿದ ಬಿ.ಟಿ. ಹತ್ತಿ ಬೀಜ ಸಂಪೂರ್ಣವಾಗಿ ಕಳಪೆ ಗುಣಮಟ್ಟದ್ದಾಗಿದ್ದು, ಭಾರಿ ಬೆಳೆ ನಷ್ಟ ಉಂಟಾಗಿದೆ. ಈ ಕುರಿತು ಇನ್ನೂ ಕ್ರಮ ಕೈಗೊಳ್ಳದಿರುವುದೇಕೆ ಎಂದು ಜಂಟಿ ಕೃಷಿ ನಿರ್ದೇಶಕರನ್ನು ಪ್ರಶ್ನಿಸಿ, ತಕ್ಷಣ ಪರಿಶೀಲನಾ ವರದಿ ಸಲ್ಲಿಸುವಂತೆ ಸೂಚಿಸಿದರು.
ಶಹಾಪುರ ಕೃಷಿ ಸಹಾಯಕ ನಿರ್ದೇಶಕರು ವಿಜ್ಞಾನಿಗಳಿಂದ ದೂರವಾಣಿ ಮೂಲಕ ತನಿಖೆ ನಡೆದಿದೆ ಎಂದು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ, ಈ ಕುರಿತಾದ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿ ಸಂಬಂಧಪಟ್ಟವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಬೇಕು. ಈ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಅವರು ನಿರ್ದೇಶಿಸಿದರು.
ಅದೇ ರೀತಿ, ರೈತರಿಗೆ ಸ್ಪ್ರೀಂಕ್ಲರ್, ಕೃಷಿ ಉಪಕರಣಗಳು ಹಾಗೂ ಇತರೆ ಫಲಾನುಭವಿ ಯೋಜನೆಗಳಡಿ ನೀಡಿರುವ ಸೌಲಭ್ಯಗಳ ಬಗ್ಗೆ ಗ್ರಾಮವಾರು, ಫಲಾನುಭವಿಗಳ ಹೆಸರು ಒಳಗೊಂಡ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದರು.
ನಂತರ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿದ ಲೋಕಾಯುಕ್ತರು, ಅಧಿಕಾರಿಗಳು ವಸತಿ ನಿಲಯಗಳಿಗೆ ನಿಯಮಿತವಾಗಿ ಭೇಟಿ ನೀಡಿ ಕೈಗೊಂಡ ಕ್ರಮಗಳ ದಾಖಲಾತಿ ಕಡ್ಡಾಯವಾಗಿ ನಿರ್ವಹಿಸಬೇಕು. ವಸತಿ ನಿಲಯಗಳಲ್ಲಿ ಸ್ವಚ್ಛತೆ, ಮೂಲಸೌಕರ್ಯ ಹಾಗೂ ವಿದ್ಯಾರ್ಥಿಗಳ—ವಿಶೇಷವಾಗಿ ವಿದ್ಯಾರ್ಥಿನಿಯರ—ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು.
ಕಾರ್ಮಿಕ ಇಲಾಖೆ ಕಚೇರಿಗೆ ಭೇಟಿ ನೀಡಿದ ವೇಳೆ, ಕಾರ್ಮಿಕರಿಗೆ ಸಕಾಲಕ್ಕೆ ಸೌಲಭ್ಯಗಳು ತಲುಪುವಂತೆ ನೋಡಿಕೊಳ್ಳಬೇಕು. ಕಾರ್ಮಿಕರನ್ನು ಮದ್ಯಪಾನದಿಂದ ದೂರವಿರಿಸುವ ಕುರಿತು ಜಾಗೃತಿ ಮೂಡಿಸಬೇಕು. ಲೇಬರ್ ಕಾರ್ಡ್, ಆರೋಗ್ಯ ವಿಮೆ ಸೇರಿದಂತೆ ಯಾವುದೇ ಸೌಲಭ್ಯ ತಪ್ಪಿ ಹೋಗದಂತೆ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ನಡೆಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಪರ ನಿಬಂಧಕರು (ವಿಚಾರಣೆ) ರಮಾಕಾಂತ್ ಚೌವ್ಹಾಣ್, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ, ಸಿದ್ದರಾಜು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







