ಯಾದಗಿರಿ | ಯುವಕರು ದುಷ್ಚಟಗಳಿಂದ ದೂರವಿದ್ದು, ಸಮಾಜದ ಜವಾಬ್ದಾರಿ ಅರಿತು ಬದುಕಬೇಕು: ಶರಣಪ್ಪ ಸಲಾದಪುರ

ಯಾದಗಿರಿ: ದೇಶದ ಯುವಜನರು ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನದಿಂದ ತಮ್ಮ ಜವಾಬ್ದಾರಿಯನ್ನು ಮರೆತು ಅಮೂಲ್ಯವಾದ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ ಹೇಳಿದರು.
ಸೋಮವಾರ ಅವರು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರ ಹುದ್ದೆಯ ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ದುಷ್ಚಟಗಳ ಆಕರ್ಷಣೆಗೆ ಬಲಿಯಾಗುತ್ತಿದ್ದಾರೆ. ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪರಿಣಾಮಕಾರಿ ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ದುಷ್ಚಟಗಳಿಂದಾಗುವ ಮಾನಸಿಕ, ದೈಹಿಕ ಹಾಗೂ ಸಾಮಾಜಿಕ ಹಾನಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವ್ಯಾಪಕ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು. ಸಾಮಾಜಿಕ ಜಾಲತಾಣಗಳು ಇಂದಿನ ದಿನಗಳಲ್ಲಿ ಜನರನ್ನು ತಲುಪುವ ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿರುವುದರಿಂದ, ಈ ವೇದಿಕೆಯನ್ನು ಸಹ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುವುದು. ಜೊತೆಗೆ ಸಾರ್ವಜನಿಕ ಪ್ರಕಟಣೆಗಳ ಮೂಲಕವೂ ಸಂದೇಶ ತಲುಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶರಣಪ್ಪ ಸಲಾದಪುರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್, ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ, ಮಂಡಳಿಯ ಕಾರ್ಯದರ್ಶಿ ಮಹೇಶ್ ಎನ್.ಎಸ್. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







