ಯಾದಗಿರಿ | ಶಾಸಕ ಶರಣಗೌಡ ಕಂದಕೂರ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಯುವಕ

ಯಾದಗಿರಿ : ಗುರುಮಠಕಲ್ ಕ್ಷೇತ್ರದ ಶಾಸಕರಾದ ಶರಣಗೌಡ ಕಂದಕೂರ ಅವರು ನನಗೆ ದೌರ್ಜನ್ಯ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬೀರಲಿಂಗಪ್ಪ ಕಿಲ್ಲನಕೇರಾ ಎನ್ನುವ ಯುವಕ ಯಾದಗಿರಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮತ್ತು ರಾಜ್ಯಪಾಲರಿಗೆ, ದಯಾಮರಣವನ್ನು ಕೋರಿ ಮನವಿ ಪತ್ರ ಸಲ್ಲಿಸಿದ್ದಾರೆ.
ಗುರುಮಠಕಲ್ ಮತಕೇತ್ರದ ಶಾಸಕ ಶರಣಗೌಡ ಕಂದಕೂರ ಅವರು, ನನ್ನ ಊರಿನ ರಾಜಶೇಖರ ಗೌಡ ಮತ್ತು ಮಲ್ಲಿಕಾರ್ಜುನ ಮಾಲಿಪಾಟೀಲ್ ಎಬಂವರಿಂದ ನನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರಿಂದ ಸೈದಾಪೂರ ಸ್ಟೇಷನ್ ನಲ್ಲಿ ನನ್ನ ಮೇಲೆ ಸುಳ್ಳು ದೂರು ನೀಡಿದ್ದಾರೆ.
ನಾನು ವಾರ್ತಾ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದು, ಆಫೀಸ್ ನ ಅಧಿಕಾರಿಗಳಿಗೆ ನನ್ನನ್ನು ಕೆಲಸದಿಂದ ತೆಗೆಯದಿದ್ದರೆ ನಿಮ್ಮ ಆಫೀಸ್ ಮುಂದೆ ಪ್ರತಿಭಟನೆ ಮಾಡುತ್ತೇನೆ ಹಾಗೂ ವಿಧಾನಸೌಧದಲ್ಲಿ ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆ, ನನ್ನ ಪವರ್ ಏನೆಂದು ತೋರಿಸುತ್ತೇನೆ ಎಂದು ವಾರ್ತಾ ಅಧಿಕಾರಿಗಳಿಗೆ ಧಮ್ಕಿ ಹಾಕಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳ ಮುಖಾಂತರ ನನ್ನನ್ನು ಕೆಲಸದಿಂದ ತೆಗೆಸಲು ಹುನ್ನಾರ ನಡೆಸಿದ್ದಾರೆ.
ಲಕ್ಷ್ಮೀದೇವಿ ದೇವಸ್ಥಾನಕ್ಕೆ ಬಿಡುಗಡೆಯಾದ 3 ಲಕ್ಷದ 98 ಸಾವಿರ ರೂ. ಅನುದಾನವನ್ನು ತಮ್ಮ ಕಾರ್ಯಕರ್ತರಿಂದ ಗ್ರಾಮಸ್ಥರ ಫೋರ್ಜರಿ ಸಹಿ ಮಾಡಿಸಿ ಬಿಲ್ ಮಾಡದಂತೆ ನಿರ್ಮೀತಿ ಕೇಂದ್ರದ ಅಧಿಕಾರಿಗಳಿಗೆ ತಡೆ ಹಿಡಿದಿದ್ದಾರೆ. ದೇವಸ್ಥಾನ ನಿರ್ಮಾಣಕ್ಕಾಗಿ ಸಾಲ ಮಾಡಿದ್ದೇನೆ. ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿ ಇರುವಾಗ ಉದ್ದೇಶ ಪೂರ್ವಕವಾಗಿ ಕಾಮಗಾರಿ ಬದಲಾವಣೆ ಮಾಡಿ ಅನುದಾನ ಬೇರೆ ಊರಿಗೆ ಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ನಿರ್ಮೀತಿ ಕೇಂದ್ರದವರಿಗೆ ಶಾಸಕರು ಪತ್ರ ಬರೆದಿದ್ದು, ಶಾಸಕರು ಅನುಮತಿ ಇಲ್ಲದೇ ನಾವು ಬಿಲ್ ಮಾಡಲು ಸಾಧ್ಯವಿಲ್ಲ ಎಂದು ನಿರ್ಮೀತಿ ಕೇಂದ್ರದ ಅಧಿಕಾರಿಗಳು ಹೇಳುತ್ತಿದ್ದಾರೆ.
ಶಾಸಕ ಶರಣಗೌಡ ಕಂದಕೂರ ಅವರು, ಜಿಲ್ಲಾಮಟ್ಟದ ಅಧಿಕಾರಿಗಳಿಗೂ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹೀಗೆ ಅಧಿಕಾರ ದುರ್ಬಳಕೆ ಮಾಡಿಕೊಂಡು ನನ್ನ ಮೇಲೆ ಸುಳ್ಳು ಕೇಸ್ ದಾಖಲಿಸಲು ಪ್ರಯತ್ನಿಸುತ್ತಿದ್ದಾರೆ.
ತಮ್ಮ ಕಾರ್ಯಕರ್ತರಿಂದ ನನ್ನ ಮೇಲೆ ಉದ್ದೇಶ ಪೂರ್ವಕವಾಗಿ ಜಗಳ ಮಾಡಿ ಹಲ್ಲೆ ಮಾಡಿಸಲು ಪ್ರೇರೇಪಿಸುತ್ತಿದ್ದಾರೆ. ಮುಂದೆ ನನಗೇನಾದರೂ ಜೀವಕ್ಕೆ ಅಪಾಯವಾದರೆ ಶಾಸಕರಾದ ಶರಣಗೌಡ ಕಂದಕೂರ ಅವರೇ ನೇರ ಹೊಣೆಗಾರರು. ಅಷ್ಷೇ ಅಲ್ಲದೇ ನನ್ನನ್ನು ಕೆಲಸದಿಂದ ತೆಗೆಸಿ ಬೀದಿಪಾಲು ಮಾಡುತ್ತಿದ್ದಾರೆ. ಹೀಗಾಗಿ ನನಗೆ ದಯಾಮರಣ ಕೊಟ್ಟು ಶಾಸಕರ ಮಾನಸಿಕ ಕಿರುಕುಳದಿಂದ ಮುಕ್ತಿ ಕೊಡಿಸಬೇಕು ಎಂದು ಕೇಳಿಕೊಂಡಿದ್ದಾರೆ.







