ಯಾದಗಿರಿ | ಆರೋಗ್ಯ ಇಲಾಖೆಯಲ್ಲಿ ನಕಲಿ ಅಂಕಪಟ್ಟಿ ನೀಡಿ ಹುದ್ದೆ ಪಡೆದ 14 ಜನರು; ಆರೋಪ

ಸಾಂದರ್ಭಿಕ ಚಿತ್ರ
ಶಹಾಪುರ : ಆರೋಗ್ಯ ಇಲಾಖೆಯ ಡಿ ಗ್ರೂಪ್ ಹುದ್ದೆಗಳ ನೇಮಕಾತಿಗೆ 2015ರಲ್ಲಿ ನಕಲಿ ಅಂಕಪಟ್ಟಿ ನೀಡಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 14 ಜನರು ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎನ್ನಲಾದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.
ಶಹಾಪುರ ತಾಲೂಕಿನ ಸಗರ, ದೋರನಹಳ್ಳಿ, ವನದುರ್ಗ, ಸುರಪುರ, ಹೇಮನೂರ ಆರೋಗ್ಯ ಕೇಂದ್ರದ ಸೇರಿ ವಿವಿಧ ಕಡೆ 14 ಜನ ಎಸ್ಸೆಸ್ಸೆಲ್ಸಿ ನಕಲಿ ಅಂಕಪಟ್ಟಿ ಸಲ್ಲಿಸಿ ಡಿ ಗ್ರೂಪ್ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂದು ನಮ್ಮ ಕರ್ನಾಟಕ ಸೇನೆ ತಾಲೂಕಾಧ್ಯಕ್ಷ ಸಿದ್ದು ಪಟ್ಟೇದಾರ ಆರೋಪಿಸಿ ಕೂಡಲೇ 14 ಜನರನ್ನು ಬಂಧಿಸಿಬೇಕೆಂದು ಆಗ್ರಹಿಸಿದ್ದಾರೆ.
ಈ ಇಲಾಖೆ ಅಲ್ಲದೇ ಇನ್ನೂ ವಿವಿಧ ಇಲಾಖೆಗಳಲ್ಲಿ ಸಹ ಇಂಥದ್ದೇ ಕಳ್ಳಾಟ ನಡೆಸಿ ಸರಕಾರದ ಮಟ್ಟದಿಂದಲೇ ನಕಲಿ ಸಹಿಗಳನ್ನು ಸಹ ತಾವೇ ಹಾಕಿಕೊಂಡು ಉದ್ಯೋಗ ಪಡೆದು ಕೊಂಡಿದ್ದಾರೆ. ವಿವಿಧ ಇಲಾಖೆಗಳಲ್ಲಿ ಕೆಲವು ಅಭ್ಯರ್ಥಿಗಳು ಉದ್ಯೋಗ ಇಲಾಖೆ ಸಿಬ್ಬಂದಿ, ಮತ್ತು ನಕಲಿ ಅಂಕಪಟ್ಟಿ ತಯಾರಿಸುವ ಜಾಲದ ಮೂಲಕ ಅಂಕಪಟ್ಟಿ ಪಡೆದುಕೊಂಡ ಉದ್ಯೋಗ ಪಡೆದಿರುವ ಅನುಮಾನ ವ್ಯಕ್ತವಾಗುತ್ತಿವೆ. ನಕಲಿ ಅಂಕಪಟ್ಟಿ ನೀಡಿ ಸರಕಾರಕ್ಕೆ ವಂಚಿಸಿರುವ ಆರೋಪ ಕೇಳಿ ಬಂದಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಮತ್ತು ಇಲಾಖೆಯ ಮೇಲಾಧಿಕಾರಿಗಳು ಕೂಡಲೇ ಇವರ ವಿರುದ್ಧ ದೂರು ದಾಖಲಿಸಬೇಕು ಮತ್ತು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕಿದೆ ಎಂದು ನಮ್ಮ ಕರ್ನಾಟಕ ಸೇನೆ ಒತ್ತಾಯಿಸಿದೆ.







