ಯಾದಗಿರಿ | ಕಾಲುವೆಯಲ್ಲಿ ಈಜಲು ತೆರಳಿದ್ದ ಯುವಕರಿಬ್ಬರು ನೀರುಪಾಲು

ಮೃತ ಯುವಕರು
ಕೆಂಭಾವಿ : ಪಟ್ಟಣದ ಸಮೀಪದ ಏವೂರ ಗ್ರಾಮದ ಹತ್ತಿರವಿರುವ ಜೆಬಿಸಿ ಕಾಲುವೆಯಲ್ಲಿ ಈಜಲು ತೆರಳಿದ್ದ ಕುರಿಗಾಹಿ ಯುವಕರಿಬ್ಬರು ನೀರುಪಾಲಾದ ಘಟನೆ ನಡೆದಿದೆ.
ಮೃತರನ್ನು ಪ್ರಧಾನಿ (19) ಮತ್ತು ಕರಿಯಪ್ಪ (19) ಎಂದು ಗುರುತಿಸಲಾಗಿದೆ.
ವಿಜಯಪುರ ಜಿಲ್ಲೆಯ 6 ಕುರಿಗಾಹಿ ಯುವಕರು ಶನಿವಾರ ಮಧ್ಯಾಹ್ನ ಸ್ನಾನ ಮಾಡಲು ಜೆಬಿಸಿ ಕಾಲುವೆಗೆ ತೆರಳಿದ್ದಾರೆ. ಅವರೆಲ್ಲರಿಗೂ ಈಜು ಬಾರದೆ ಇದ್ದಿದ್ದರಿಂದ ದಡದಲ್ಲೇ ಸ್ನಾನ ಮಾಡಿದ್ದಾರೆ. ಈ ವೇಳೆ ಕಾಲಿಗೆ ಹತ್ತಿದ್ದ ಕೊಳೆಯನ್ನು ತೊಳೆಯಲು ಮತ್ತೊಮ್ಮೆ ಪ್ರಧಾನಿ (19) ಎಂಬ ಯುವಕ ನೀರಿಗೆ ಇಳಿಯಲು ಹೋದಾಗ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾನೆ ಎನ್ನಲಾಗಿದೆ.
ಈಜು ಬರದೆ ಇದ್ದರೂ ಪ್ರಧಾನಿ ಎಂಬಾತನ್ನು ರಕ್ಷಿಸಲು ಹೋದ ಕರಿಯಪ್ಪ ಕೂಡ ನೀರು ಪಾಲಾಗಿದ್ದಾನೆ ಎಂದು ತಿಳಿದುಬಂದಿದೆ.
ಇಬ್ಬರು ಯುವಕರು ಮೃತದೇಹ ಸತತ ಕಾರ್ಯಾಚರಣೆ ನಡೆಸಿದ ನಂತರ ದೊರೆತಿದ್ದು, ಈ ಕುರಿತು ಕೆಂಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





