Yadagiri | ಭೂಮಾಪಕ, ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಪರೀಕ್ಷೆ: ವ್ಯವಸ್ಥಿತವಾಗಿ ನಡೆಸಲು ಡಿಸಿ ಸೂಚನೆ

ಯಾದಗಿರಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಅ. 2ರಂದು ನಡೆಯಲಿರುವ ಭೂಮಾಪಕರ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆ ಹಾಗೂ ಅ. 4ರಂದು ನಡೆಯಲಿರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭೂಮಾಪಕರ ಹಾಗೂ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆ ನಡೆಸುವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರೀಕ್ಷೆಗಳ ಸಂದರ್ಭದಲ್ಲಿ ಯಾವುದೇ ಲೋಪಗಳಿಗೆ ಅವಕಾಶ ನೀಡದೆ, ಶಿಸ್ತುಬದ್ಧವಾಗಿ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಾರ್ಗಸೂಚಿಗಳ ಅನ್ವಯ ಪರೀಕ್ಷೆಗಳನ್ನು ನಡೆಸಬೇಕು. ಬೆಳಿಗ್ಗೆ ಹಾಗೂ ಮಧ್ಯಾಹ್ನದ ಎರಡು ಅವಧಿಗಳಲ್ಲಿ ಪರೀಕ್ಷೆಗಳು ನಡೆಯಲಿರುವುದರಿಂದ ಸಮಯ ಪಾಲನೆಯೊಂದಿಗೆ ಪರೀಕ್ಷೆ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಭೂಮಾಪಕರ ಹುದ್ದೆಗಳ ಪರೀಕ್ಷೆಗೆ ಐದು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 2,259 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅದೇ ರೀತಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಪರೀಕ್ಷೆಗೆ 25 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 9,104 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಹೀಗಾಗಿ ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರು, ಉಪಮುಖ್ಯ ಅಧೀಕ್ಷಕರು ಹಾಗೂ ಪ್ರಶ್ನೆ ಪತ್ರಿಕೆ ನಿರ್ವಹಿಸುವವರು ಯಾವುದೇ ಲೋಪಕ್ಕೆ ಅವಕಾಶ ನೀಡದೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು. ಗೌಪ್ಯ ಸಾಮಗ್ರಿಗಳನ್ನು ನೀಡುವಾಗ ಹಾಗೂ ಪಡೆಯುವಾಗ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಆಸನ ವ್ಯವಸ್ಥೆ ಸಮರ್ಪಕವಾಗಿರಬೇಕು ಹಾಗೂ ಸಿಸಿಟಿವಿಗಳು ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಕೊಠಡಿ ಮೇಲ್ವಿಚಾರಕರು ಎಲ್ಲ ಮಾರ್ಗಸೂಚಿಗಳನ್ನು ಅರಿತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಪರೀಕ್ಷೆಗಳಲ್ಲಿ ಕೈಗಡಿಯಾರ, ಕ್ಯಾಲ್ಕುಲೇಟರ್, ಬ್ಲೂಟೂತ್ ಸಾಧನ, ಮೊಬೈಲ್, ಪೆನ್‌ಡ್ರೈವ್, ಇಯರ್‌ಫೋನ್, ಮೈಕ್ರೊಫೋನ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಗೆ ನಿಷೇಧವಿದ್ದು, ಈ ಕುರಿತು ತೀವ್ರ ನಿಗಾ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇತ್ತೀಚೆಗೆ ಪೊಲೀಸ್ ಇಲಾಖೆಯ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ನಡೆಸಿರುವುದಕ್ಕೆ ಅಧಿಕಾರಿಗಳನ್ನು ಅಭಿನಂದಿಸಿದ ಅವರು, ಇದೇ ರೀತಿಯಲ್ಲಿ ಈ ಪರೀಕ್ಷೆಗಳನ್ನೂ ಅಚ್ಚುಕಟ್ಟಾಗಿ ನಡೆಸುವಂತೆ ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತಲೂ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ಪರೀಕ್ಷಾ ಕೇಂದ್ರಗಳಲ್ಲಿನ ಸಿಸಿಟಿವಿಗಳು ಸುಸ್ಥಿತಿಯಲ್ಲಿರುವುದನ್ನು ಮುಂಚಿತವಾಗಿ ಖಚಿತಪಡಿಸಿಕೊಳ್ಳಬೇಕು. ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುದೀಪ್ ಮಾತನಾಡಿ, ಓಎಂಆರ್ ಉತ್ತರ ಪತ್ರಿಕೆ ಹಾಗೂ ಪ್ರಶ್ನೆ ಪತ್ರಿಕೆಗಳ ನಿರ್ವಹಣೆ ಮತ್ತು ಅಭ್ಯರ್ಥಿಗಳ ಪ್ರವೇಶ ಪತ್ರ ಪರಿಶೀಲನೆ ಕುರಿತು ಮೇಲ್ವಿಚಾರಕರಿಗೆ ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಆಹಾರ ಪದಾರ್ಥ, ನೀರಿನ ಬಾಟಲಿ ಹಾಗೂ ಶೂಗಳನ್ನು ತರುವುದಕ್ಕೆ ನಿಷೇಧವಿದೆ ಎಂದು ತಿಳಿಸಿದರು.
ಅಭ್ಯರ್ಥಿಗಳ ವಿವರಗಳನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ವಸ್ತ್ರ ಸಂಹಿತೆ ಪಾಲಿಸುವಂತೆ ಸೂಚಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆಯ ರಹಸ್ಯ ಬಂಡಲ್‌ಗಳನ್ನು ಸಾಗಿಸಲು ತ್ರಿಸದಸ್ಯ ಸಮಿತಿ ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಜಾಮರ್‌ಗಳನ್ನು ಅಳವಡಿಸುವುದು ಸೇರಿದಂತೆ ಕೈಗೊಂಡಿರುವ ಇನ್ನಿತರ ಸಿದ್ಧತೆಗಳ ಕುರಿತು ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳು ಉಪಸ್ಥಿತರಿದ್ದರು.






