Yadagiri | ಅಕ್ರಮವಾಗಿ ಸಂಗ್ರಹಿಸಿದ್ದ 29 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ

ಯಾದಗಿರಿ: ಸುರಪುರ ತಾಲೂಕಿನಲ್ಲಿ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ವಿತರಿಸಲಾಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಣೆ ಮಾಡುತ್ತಿದ್ದ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ, 29 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.
ಸುರಪುರ ತಾಲೂಕಿನ ಪರಸನಹಳ್ಳಿ ಗ್ರಾಮದ ಸಮೀಪ ಕಂಭಾವಿ–ಸುರಪುರ ರಸ್ತೆಯ ಪಕ್ಕದಲ್ಲಿರುವ ಬಸವರಾಜ ತಂದೆ ಆಡಪ್ಪ ಸಜ್ಜನ ಎಂಬುವರ ಮನೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಸುರಪುರ ಆಹಾರ ನಿರೀಕ್ಷಕರು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿದರು.
ದಾಳಿಯ ವೇಳೆ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 29 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿಯಾದ ಅಕ್ಕಿಯ ಅಂದಾಜು ಮೌಲ್ಯ 67,280 ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಸವರಾಜ ವಿರುದ್ಧ ಸೆಪ್ಟೆಂಬರ್ 25, 2026ರಂದು ಕಂಭಾವಿ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ–1955ರ ಕಲಂ 3 ಮತ್ತು 7ರ ಅಡಿಯಲ್ಲಿ ಪ್ರಕರಣ (ಸಂಖ್ಯೆ: 173/2026) ದಾಖಲಿಸಲಾಗಿದೆ.
ಪ್ರಕರಣದ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.






