ಯಾದಗಿರಿ | 3 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರ ಚಾಲನೆ

ಯಾದಗಿರಿ : ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆಯಾದ ಸಂದರ್ಭದಲ್ಲಿ ಜನ ಓಡಾಟಕ್ಕೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಗುರಮಠಕಲ್ ಮತಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಮಕ್ಕೆ 10 ಲಕ್ಷ ವೆಚ್ಚದಲ್ಲಿ ಸೋಲಾರ್ ವಿದ್ಯುತ್ ದೀಪ ಅಳವಡಿಸಲು ಚಿಂತನೆ ನಡೆಸಿದ್ದು, ಅದರ ಅಂಗವಾಗಿ ಅನಪೂರ ಗ್ರಾಮವೊಂದಕ್ಕೆ 3 ಸೋಲಾರ್ ವಿದ್ಯುತ್ ದೀಪ ಅಳವಡಿಸಿದ್ದು, ಅನಪೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 5 ಸೋಲಾರ್ ವಿದ್ಯುತ್ ದೀಪ ಅಳವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಗುರಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.
ಅನಪೂರ ಗ್ರಾಮದಲ್ಲಿ 3ಕೋಟಿ ರೂ. ವೆಚ್ಚದ ರಸ್ತೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಮಗಾರಿಗಳನ್ನು ಉತ್ತಮವಾಗಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅನಪೂರ ಗ್ರಾಮದ ಶಾಲೆಗೆ ಮೂಲಸೌಕರ್ಯ ಒದಗಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದು, ಶಾಲೆಗೆ ಕಾಂಪೌಂಡ್ ಗೋಡೆ ಸೇರಿದಂತೆ ಸಣ್ಣಪುಟ್ಟ ಕಾಮಗಾರಿಗಳನ್ನು ಗ್ರಾಪಂ ಅನುದಾನದಲ್ಲಿ ಕೈಗೊಳ್ಳಿ ಹೆಚ್ಚಿನ ಅನುದಾನ ಬೇಕಿದ್ದರೆ ನನ್ನ ಗಮನಕ್ಕೆ ತಂದರೆ ನಾನು ಹೆಚ್ಚಿನ ಅನುದಾನ ಕೊಟ್ಟು ಅನಪೂರ ಗ್ರಾಮಾಭಿವೃದ್ಧಿಗೆ ನಾನು ಬದ್ದನಾಗಿದ್ದೇನೆ ಎಂದು ಹೇಳಿದರು.
ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಗುತ್ತಿಗೆದಾರ, ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಪ್ರತಿದಿನವು ಕಾಮಗಾರಿಯ ಮೇಲೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಲಕ್ಷ್ಮೀರಡ್ಡಿ ಅನಪೂರ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟೆ, ರಾಮಣ್ಣ ಕೋಟಗೇರಾ, ಕೆಆರ್‌ಡಿಎಲ್ ಎಇಇ ಶಿವರಾಜ ಹುಡೆದ, ನಿರ್ಮಿತಿ ಕೇಂದ್ರದ ಅಬ್ದುಲ್ ನಬಿ, ಪಿಡಿಒ ಹಣಮಂತ್ರಾಯಗೌಡ, ಬಸಣ್ಣ ದೇವರಳ್ಳಿ, ಮಲ್ಲಣಗೌಡ ಹೊಸಳ್ಳಿ, ಮಲ್ಲಿಕಾರ್ಜುನ ಅರುಣಿ, ನರಸಪ್ಪ ಕವಡೆ, ಈಶ್ವರ ನಾಯಕ, ಸೇರಿದಂತೆ ಇತರರಿದ್ದರು.
ಅನಪೂರ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ ನಿರ್ಮಿಸಿದ 2 ಕೋಣೆಗಳು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಿರ್ಮಿಸಿದ 2 ಕೋಣೆಗಳು ಲೋಕಾರ್ಪಣೆ ಮಾಡಲಾಯಿತು. ದಂತಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಿರ್ಮಿಸಿದ 3 ಕೋಣೆಗಳು ಲೋಕಾರ್ಪಣೆ ಮಾಡಲಾಯಿತು. ಮಲ್ಲಾಪೂರ ತಾಂಡಾದಲ್ಲಿ ಸಿಸಿ ರಸ್ತೆ, ಚಂಡರಕಿ ಗ್ರಾಮಕ್ಕೆ ಪೈಪ್‌ಲೈನ್ ಕಾಮಗಾರಿಗೆ ಅಡಿಗಲ್ಲು, ಪುಟ್‌ಪಾಕ್ ಗ್ರಾಮಕ್ಕೆ ಪೈಪ್‌ಲೈನ್ ಕಾಮಗಾರಿಗೆ ಅಡಿಗಲ್ಲು, ಪುಟ್‌ಪಾಕ್ ಗ್ರಾಮದಲ್ಲಿ ಅಕ್ಷರ ಅವಿಷ್ಕಾರ ಅನುಷ್ಠಾನ, ಚಂಡ್ರಿಕಿ ಗ್ರಾಮದ ಕೋಟೆ ಹಳ್ಳಕ್ಕೆ ಬ್ರೀಜ್ ನಿರ್ಮಾಣ ಸೇರಿದಂತೆ 3ಕೋಟಿಗೂ ಹೆಚ್ಚಿನ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.







